ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಬ್ಬರ್ ನಂತಿರುವ ಇಡ್ಲಿ, ತರಕಾರಿ ಇಲ್ಲದ ಸಾಂಬಾರ್, ನೀರಾಗಿರುವ ಚಟ್ನಿ...!
-ಇದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಪೂರೈಸುತ್ತಿರುವ ಆಹಾರದ ಗುಣಮಟ್ಟ.
ಈ ರೀತಿ ಆರೋಪಿಸುತ್ತಿರುವುದು ವಿರೋಧ ಪಕ್ಷದವರೂ ಅಲ್ಲ, ಗ್ರಾಹಕರಂತೂ ಅಲ್ಲ. ಸ್ವತಃ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರು!.
ಮಂಗಳವಾರ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಎಚ್‌ಎಂಟಿ ವಾರ್ಡ್‌ನ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಆಹಾರ ಸೇವನೆ ಮಾಡಿ ತಮ್ಮ ಅನಿಸಿಕೆಯನ್ನು ಕ್ಯಾಂಟೀನ್ ಪುಸಕ್ತದಲ್ಲಿ ಈ ರೀತಿ ದಾಖಲಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವವೂ ಸುಧಾರಿಸಬೇಕಿದೆ.
ಎಚ್‌ಎಂಟಿ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುವ ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಎರಡು ದಿನದಲ್ಲಿ ಉತ್ತರ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಆ ಕುರಿತ ದಾಖಲೆ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಸೆ.6ಕ್ಕೆ ಗುತ್ತಿಗೆದಾರರಿಗೆ ನೋಟಿಸ್
ಸೆ.6 ರಂದು ರಾಜಾಜಿನಗರದ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಗ್ಗೆ 8.30ಕ್ಕೆ ಉಪಾಹಾರ ಖಾಲಿ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ, ಆಹಾರ ಪೂರೈಕೆಗೆ ಗುತ್ತಿಗೆ ಪಡೆದ ಶಶಿ ಕ್ಯಾಟರಿಂಗ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಪ್ರತಿ ಕ್ಯಾಂಟೀನ್‌ಗೆ ನೋಡಲ್ ಅಧಿಕಾರಿ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಇಂದಿರಾ ಕ್ಯಾಂಟೀನ್ ಇವೆ. ಈ ಪೈಕಿ 29 ಇಂದಿರಾ ಕ್ಯಾಂಟೀನ್‌ಗಳಿಗೆ ಶಶಿ ಕ್ಯಾಟರಿಂಗ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ, ಇನ್ನುಳಿದ 21 ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ರಿವಾರ್ಡ್ಸ್ ಸಂಸ್ಥೆ ಪಡೆದು ಕೊಂಡಿದೆ.
ಈ ಎಲ್ಲ ಕ್ಯಾಂಟೀನ್‌ಗಳಿಗೆ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವುದಕ್ಕೆ ಸೂಚಿಸಲಾಗಿದೆ. ಜತೆಗೆ, ದಿನಕ್ಕೆ ಒಂದು ಬಾರಿಯಾದರೂ ಆ ನೋಡಲ್ ಅಧಿಕಾರಿ ಜವಾಬ್ದಾರಿ ನೀಡಿದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಸೇವನೆ ಮಾಡಿ ವರದಿ ಸಿದ್ಧಪಡಿಸಬೇಕೆಂದು ಪಶ್ಚಿಮ ನಗರ ಪಾಲಿಕೆ ಆಯುಕ್ತರು ನಿರ್ದೇಶಿಸಿದ್ದಾರೆ.
ಅಕ್ರಮ ಲೆಕ್ಕ ತಪ್ಪಿಸಲು ಸಿಸಿಟಿವಿ ಪರಿಶೀಲನೆ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಳ್ಳು ಗ್ರಾಹಕರ ಲೆಕ್ಕ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಹೀಗಾಗಿ, ಮಾರ್ಷಲ್ ನಿಯೋಜಿಸಿ ಲೆಕ್ಕ ಪಕ್ಕಾ ಮಾಡುವ ಕೆಲಸ ಮಾಡಲಾಗುತ್ತಿದೆ. ಅದರೊಂದಿಗೆ ಇದೀಗ ಎಲ್ಲ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಗ್ರಾಹಕನ ಲೆಕ್ಕಾಚಾರ ಹಾಕುವುದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಹೀಗಾಗಿ, ಎಲ್ಲ ಇಂದಿರಾ ಕ್ಯಾಂಟೀನ್ ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡುವುದಕ್ಕೆ ಸೂಚಿಸಲಾಗಿದೆ. ಸಿಸಿಟಿವಿಯಲ್ಲಿ ದಾಖಲಾಗುವ ಗ್ರಾಹಕರ ಆಧಾರದಲ್ಲಿ ಹಣ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.
ಹೊಸ ಮೆನು ಆರಂಭಕ್ಕೆ ಶೀಘ್ರ ಸಭೆ
ರಾಗಿ ಮುದ್ದೆ, ಚಪಾತಿ, ಟೀ-ಕಾಫಿ ಸೇರಿದಂತೆ ಇಂದಿರಾ ಕ್ಯಾಂಟೀನ್ ಮೆನುನಲ್ಲಿ ಸಾಕಷ್ಟು ಬದಲಾವಣೆ ಮಾಡಿ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ಆದರೆ, ಹೊಸ ಮೆನು ಪ್ರಕಾರ ಆಹಾರ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲಿ ಸಭೆ ನಡೆಸಿ ಹೊಸ ಮೆನು ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಪ್ರತಿ ದಿನ ಬೆಳಗ್ಗೆ ರಸ್ತೆ, ಉದ್ಯಾನವನ ಪರಿಶೀಲನೆ ವೇಳೆ ಹತ್ತಿರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಉಪಾಹಾರ ಮಾಡುತ್ತಿದ್ದೇನೆ. ಸಾಕಷ್ಟು ಸಮಸ್ಯೆ ಇದ್ದು, ಪರಿಹಾರ ಮಾಡುವುದಕ್ಕೆ ನೋಡಲ್ ಅಧಿಕಾರಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಗ್ರಾಹಕರು ಕಾಫಿ ಮತ್ತು ಟೀ ಬೇಕು ಎನ್ನುತ್ತಿದ್ದಾರೆ. ಶೀಘ್ರದಲ್ಲಿ ಪೂರೈಕೆಗೆ ಕ್ರಮ ವಹಿಸಲಾಗುವುದು.
- ಡಾ.ಕೆ.ವಿ.ರಾಜೇಂದ್ರ, ಆಯುಕ್ತರು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ.