ಕನ್ನಡಪ್ರಭ ವಾರ್ತೆ ಮೈಸೂರು
ಆಧುನಿಕ ಕರ್ನಾಟಕದ ನಿರ್ಮಾತೃ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆಯಲ್ಲಿ ನಗರದ ಕೆ.ಆರ್. ವೃತ್ತದಲ್ಲಿರುವ ಅವರ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಮಾಜಿಕ ನ್ಯಾಯ ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾ ಜಲ ವಿದ್ಯುತ್ ಯೋಜನೆ, ಗಂಧದ ಎಣ್ಣೆ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯ ಮೂಲಕ ನಾಲ್ವಡಿ ಅವರು ಆಧುನಿಕ ಮೈಸೂರಿನ ನಿರ್ಮಾತೃವಾಗಿದ್ದರು. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ತರುವ ಮೂಲಕ ಇತಿಹಾಸ ಸೃಷ್ಟಿಸಿದರು. ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಗೆಜ್ಜೆಪೂಜೆ ಮತ್ತು ಅಸ್ಪೃಶ್ಯತೆ ಆಚರಣೆಯನ್ನು ಕಡ್ಡಾಯವಾಗಿ ನಿಷೇಧಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು ಎಂದರು.ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಉದ್ಯೋಗದ ನೀಡುವ ದೃಷ್ಟಿಯಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಶಿಕ್ಷಣ ಕೇಂದ್ರಗಳನ್ನು ತೆರೆಯುವ ಮೂಲಕ ಶಿಕ್ಷಣದ ಕ್ರಾಂತಿಯನ್ನು ಕೂಡ ಅವರ ಕಾಲದಲ್ಲಿ ಮಾಡಿದ್ದರು. ವಿಶೇಷವಾಗಿ ಪ್ರಜಾಪ್ರತಿನಿಧಿ ಸಭೆ, ನಗರಗಳ ಯೋಜನೆಗಳು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳ ಉನ್ನತೀಕರಣ, ಕೃಷಿ ನೀರಾವರಿ ಕೈಗಾರಿಕೆಗಳಿಗೆ ಒತ್ತು ನೀಡಿ ಯೋಜನೆಗಳನ್ನು ರೂಪಿಸಿದ್ದರು. ಅಂತಹ ಒಬ್ಬ ನಾಡುಕಂಡ ಅಪರೂಪದ ಮಹಾರಾಜರನ್ನ ಮೈಸೂರಿಗರಾದ ನಾವೆಲ್ಲರೂ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಮೈಸೂರು ಸಂಸ್ಥಾನದ 24ನೇ ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜನ್ಮದಿನವನ್ನು ನಂಜನಗೂಡು ರಸ್ತೆಯ ಮಧುವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕದ ಮುಂದೆ ಮೈಸೂರು ಯೋಗಿಸ್ ಟ್ರಸ್ಟ್ ಮತ್ತು ಮೈಸೂರು ಸಿಟಿಜನ್ಸ್ ವಾಯ್ಸ್‌ವತಿಯಿಂದ ಆಚರಿಸಲಾಯಿತು.ಬೆಳಗ್ಗೆ 7.30ಕ್ಕೆ ನಾಲ್ವಡಿ ಸ್ಮಾರಕದ ಮುಂದೆ ಸಪ್ತ ಖುಷಿ ಆಶ್ರಮದ ಶ್ರೀಗಳ ಸಾನಿಧ್ಯದಲ್ಲಿ ಓಂಕಾರದೊಂದಿಗೆ ಸ್ಮರಣ ಕಾರ್ಯಕ್ರಮ ಪ್ರಾರಂಭವಾಯಿತು. ಖ್ಯಾತ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್, ಖ್ಯಾತ ಯೋಗ ಪಟು ತಿರುಮಲೈ ಯೋಗ ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ. ಮಂಜುನಾಥ್, ಪಾರ್ಥಸಾರಥಿ ಇದ್ದರು.