ಕನ್ನಡಪ್ರಭ ವಾರ್ತೆ ಭದ್ರಾವತಿ
ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳು ವಿಫಲವಾಗಿವೆ. ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳುವ ಮೂಲಕ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ.ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ಯಶಸ್ಸು ಕಂಡಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿ ಮತಗಳಿಕೆ ಮಾಡಿಕೊಳ್ಳುವ ಸಂಸದ ಬಿ.ವೈ ರಾಘವೇಂದ್ರರವರು ಕೇಂದ್ರ ಸರ್ಕಾರದ ಗಮನ ಸೆಳೆದು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಸುಮಾರು ೧೫ ಸಾವಿರ ಕೋ.ರು. ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ಕಾರ್ಯದಲ್ಲಿ ಇದುವರೆಗೂ ಕುಮಾರಸ್ವಾಮಿಯವರು ಯಾವುದೇ ಯಶಸ್ಸು ಕಂಡಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಕ್ಷೇತ್ರದ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ರವರಿಗೆ ಮತ ನೀಡಿದ್ದಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಎಂಪಿಎಂ ಕಾರ್ಖಾನೆ ಸಹ ಪುನಶ್ಚೇತನಗೊಂಡಿಲ್ಲ. ಅಲ್ಲದೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಹ ಲಭಿಸಿಲ್ಲ. ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಸಹ ನಡೆದುಕೊಳ್ಳಬೇಕು. ಪ್ರಸ್ತುತ ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಬದಲಾವಣೆ ಕುರಿತು ಚರ್ಚೆಯಾಗುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಸಂಗಮೇಶ್ವರ್‌ಗೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರುನಾಡ ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್, ವಿಜಯಕುಮಾರ್, ಪರಮೇಶ್ವರ್, ಇಂದ್ರಮ್ಮ, ಮಹಾದೇವಿ, ದಿವ್ಯಶ್ರೀ, ಜಟ್ಟೋಜಿರಾವ್ ಮತ್ತು ಶಿವಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.