ಕನ್ನಡಪ್ರಭ ವಾರ್ತೆ ಲೋಕಾಪುರ
ತಿಮ್ಮಾಪುರ ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರದಿಂದ ಸ್ಪಂದನೆ ಸಿಕ್ಕಿದ್ದು, ಲೀಸ್‌ಗೆ ವಹಿಸಿಕೊಡುವುದರ ಜೊತೆಗೆ ₹40 ಕೋಟಿ ಸಾಲಕ್ಕೆ ಸರ್ಕಾರ ಖಾತ್ರಿ ನೀಡಲು ಸರ್ಕಾರ ಒಪ್ಪಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಉತ್ತಮ ಬಿಡ್‌ದಾರರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.ಗುರುವಾರ ಪಟ್ಟಣದ ಎಪಿಎಂಸಿ ಆವರಣದ ಉದಪುಡಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಕಾರ್ಖಾನೆ ಪುನಶ್ಚೇತನಕ್ಕೆ ಮುತುವರ್ಜಿ ವಹಿಸುವ ಮೂಲಕ, ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡಿದ್ದಾರೆ. ಇಬ್ಬರಿಗೂ ಕೃತಜ್ಞತೆ ಸಲ್ಲಿಸಲಾಗುವುದಾಗಿ ಹೇಳಿದರು.
20 ವರ್ಷಗಳ ಕಾಲ ಮುಧೋಳ ಶಾಸಕರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರು ಕಾರ್ಖಾನೆ ಪ್ರಾರಂಭಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ದುರದೃಷ್ಟಕರ ಸಂಗತಿ. ರೈತರ ಮತ್ತು ಕಾರ್ಮಿಕರ ಹಿತ ಕಾಯುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಕೊಟ್ಟ ಮಾತಿನಂತೆ ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಶ್ರಮಿಸಿದೆ ಎಂದರು.ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿ, 2022-23ರ ಹಂಗಾಮಿನಲ್ಲಿ ಮುಂಚಿನ ಆಡಳಿತ ಮಂಡಳಿ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಬಿಲ್ ಕೊಡಲಾಗದೆ ಅಸಹಾಯಕರಾಗಿ ರಾಜೀನಾಮೆ ನೀಡಿದ್ದರು. ಸಚಿವ ಆರ್.ಬಿ.ತಿಮ್ಮಾಪುರ ಅವರು ಮುತುವರ್ಜಿ ವಹಿಸಿ ರೈತರ ಹಿತದೃಷ್ಟಿಯಿಂದ ₹27.60 ಕೋಟಿ ರೈತರಿಗೆ ಬಿಲ್ ಕೊಡುವ ವ್ಯವಸ್ಥೆ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಿದರು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, 20 ವರ್ಷಗಳಿಂದ ಮುಧೋಳ ಶಾಸಕರಾಗಿದ್ದ ಗೋವಿಂದ ಕಾರಜೋಳ ಅವರು ಕಾರ್ಖಾನೆ ಏಳಿಗೆ ಬಗ್ಗೆ ಮುತುವರ್ಜಿ ವಹಿಸದೇ ಕಾರ್ಖಾನೆ ಅವನತಿಗೆ ಕಾರಣರಾಗಿದ್ದಾರೆ, ಈ ವಿಷಯದಲ್ಲಿ ಕಾರಜೋಳ ಅವರು ಪೂರಕವಾಗಿ ಸ್ಪಂದಿಸಿದ್ದರೆ ಇಂದು ಕಾರ್ಖಾನೆ ಬಂದ್ ಆಗುವ ಪರಿಸ್ಥಿತಿ ಬರುತ್ತಿರಲಿಲ್ಲ.ರೈತರು ಹಾಗೂ ಕಾರ್ಮಿಕರು ರಸ್ತೆಗೆ ಬರುವ ಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಈಗಿನ ಸ್ಥಿತಿಗೆ ಕಾರಜೋಳರೇ ಕಾರಣ ಎಂದರು.ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಮಾಜಿ ಸಂಸದ ದಿ.ಎಸ್.ಟಿ. ಪಾಟೀಲ, ಆರ್.ಬಿ. ತಿಮ್ಮಾಪುರ, ತಾಲೂಕಿನ ರೈತರು ಸೇರಿ ಸಹಕಾರ ರಂಗದ ಕಾರ್ಖಾನೆ ಕಟ್ಟಿದರು. ಬಿಜೆಪಿಯವರು ಕಾರ್ಖಾನೆಯ ಆಡಳಿತ ವಶಕ್ಕೆ ಪಡೆದು 20 ವರ್ಷಗಳ ಕಾಲ ಅಧಿಕಾರ ನಡೆಸಿ ಸಾಲ ಮಾಡಿ ಕಾರ್ಖಾನೆಯನ್ನು ನಷ್ಟದಲ್ಲಿ ದೂಡಿ ಕಾರ್ಖಾನೆ ಬಂದ್ ಕೆಡೆವಿದರು. ಈಗ ಕಾರ್ಖಾನೆ ಪುನಃ ಪ್ರಾರಂಭಿಸಲು ಮತ್ತೆ ಆರ್.ಬಿ.ತಿಮ್ಮಾಪುರ ಬರಬೇಕಾಯಿತು ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಗುರುರಾಜ ಉದಪುಡಿ, ಪಿಕೆಪಿಎಸ್ ಅಧ್ಯಕ್ಷ ಆನಂದ ಹಿರೇಮಠ, ಲಕ್ಷ್ಮಣ ಮಾಲಗಿ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪಾಟೀಲ, ಶಿವಾನಂದ ದಂಡಿನ, ಕೃಷ್ಣಾ ಹೂಗಾರ, ಯಶವಂತ ಹರಿಜನ, ಮುತ್ತಪ್ಪ ಚೌಧರಿ, ಅಬ್ದುಲ್ ರೆಹಮಾನ್ ತೊರಗಲ್, ಕುಮಾರ ಕಾಳಮ್ಮನವರ, ಗೋಪಾಲ ಲಮಾಣಿ, ವಿಠ್ಠಲ ಆನೆಗುದ್ದಿ ಇತರರು ಇದ್ದರು.-----------------------------ಕೋಟ್....
ಕಾರಜೋಳ ಅವರು ಸೋತ ಹತಾಸೆಯಲ್ಲಿ ಸಚಿವರ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಅವರು ಕಾರ್ಖಾನೆ ಅಧ್ಯಕ್ಷರಾದ ಅವಧಿ ಹಾಗೂ ಇಲ್ಲಿಯವರೆಗೂ ಕಾರ್ಖಾನೆಯ ನಷ್ಟದ ಬಗ್ಗೆ ತನಿಖೆಯಾಗಬೇಕು. ರೈತರಿಗೆ ಹಾಗೂ ಕಾರ್ಮಿಕರಿಗೆ ಆದ ನೋವುಗಳು ಎಲ್ಲರಿಗೂ ತಿಳಿಯಬೇಕು. ಸರ್ಕಾರಿ ತನಿಖಾಧಿಕಾರಿ ನೇಮಕ ಮಾಡಿ ನಿಷ್ಪಕ್ಷಪಾತ ತನಿಖೆ ಮಾಡಿಸಬೇಕು.-ಎಸ್.ಜಿ.ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ
----------೧೬-ಎಲ್.ಕೆ.ಪಿ-೧ : ಲೋಕಾಪುರ ಪಟ್ಟಣದ ಎಪಿಎಂಸಿ ಆವರಣದ ಉದಪುಡಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಜಿಲ್ಲಾ ಕೆಪಿಸಿಸಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಅಶೋಕ ಕಿವಡಿ, ಶಿವಾನಂದ ಉದಪುಡಿ, ಕಾಶಿನಾಥ ಹುಡೇದ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ, ಆನಂದ ಹಿರೇಮಠ, ಭೀಮನಗೌಡ ಪಾಟೀಲ ಇದ್ದರು.