ಹುಬ್ಬಳ್ಳಿ: ನನ್ನ ಪಕ್ಷಾಂತರದ ಪ್ರಭಾವ ಈಗ ಪಂಚರಾಜ್ಯಗಳ ಚುನಾವಣೆಯ ಮೇಲೂ ಆಗಿದೆ. ಹಾಗಾಗಿಯೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಬಿಜೆಪಿ ಟಿಕೆಟ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.
ಎಲ್ಲವೂ ಅಧಿಕಾರದ ಆಸೆಗಾಗಿ: ಅಧಿಕಾರದ ಆಸೆಗಾಗಿ ಬಿಜೆಪಿಯಲ್ಲಿ ಈಗ ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ವಯಸ್ಸಿನ ನೆಪದಲ್ಲಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಮನೆಗೆ ಕಳುಹಿಸಿದರು. ಆದರೆ, ಈಗ ನೋಡಿದರೆ 80 ವರ್ಷ ಆದವರಿಗೂ ಟಿಕೆಟ್ ಕೊಟ್ಟಿದ್ದಾರೆ. 3-4 ಮಾಜಿ ಮುಖ್ಯಮಂತ್ರಿಗಳಿಗೆ ಬಿಜೆಪಿಯಿಂದ ಈ ಬಾರಿ ಟಿಕೆಟ್ ನೀಡಲಾಗಿದೆ. ಇದಕ್ಕೆ ಮೂಲ ಕಾರಣ ಜಗದೀಶ್ ಶೆಟ್ಟರ್ ಪ್ರಭಾವ ಎಂದರು.
ಬಿಜೆಪಿ ಜಗಳ ಮುಗಿದಿಲ್ಲ: ಬಿಜೆಪಿಯು ಇಂದು ಹೀನಾಯ ಸ್ಥಿತಿಗೆ ತಲುಪಿದೆ. ರಿಪೇರಿ ಮಾಡಲಾರದಷ್ಟು ವ್ಯವಸ್ಥೆ ಹದಗೆಟ್ಟು ಹೋಗಿದೆ. ಬಿ.ವೈ. ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು ಬರಲಿಲ್ಲ. ವೀಕ್ಷಕರು ಸಹ ಬಂದಿರಲಿಲ್ಲ. ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ. ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರುವುದು ಅವರಿಗೆ ಬಿಟ್ಟ ವಿಚಾರ. ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ಹಾಗಾಗಿ ವಿಜಯೇಂದ್ರ ಅವರನ್ನು ಮಾಡಿದ್ದಾರೆ ಅಷ್ಟೇ. ಆದರೆ, ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡಿ ಎಂದರು.ಹಿರಿಯರ ಕಡೆಗಣನೆ: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ದೆಹಲಿಗೆ ಕರೆಸಿ ಮೂರು ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯ ವರಿಷ್ಠರು ತೋರಲಿಲ್ಲ. ಬಿಜೆಪಿ ಹಿರಿಯರನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆ ಎಂದರು.
ಭರವಸೆ ಕಳೆದುಕೊಂಡಿದೆ: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದರಿಂದ ಏನೂ ಆಗಲ್ಲ. ಬಿಜೆಪಿ ಕುಸಿಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಶಕ್ತಿ ತೋರಿಸಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ಭರವಸೆ ಕಳೆದುಕೊಂಡಿದ್ದಾರೆ. ನಾಯಕನಿಲ್ಲದ ಪಕ್ಷ ಎನ್ನುವ ಕೊರಗು ಅವರನ್ನು ಕಾಡುತ್ತಿದೆ. ಆಪರೇಷನ್ ಕಮಲ ಪ್ರಕ್ರಿಯೆ ಇಂದಿಗೂ ನಡೆಯುತ್ತಿದೆ. ಈ ರೀತಿ ಮಾಡಿದರೆ ಕೈ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಅವರ ಆಪರೇಷನ್ ಕಮಲ ಪ್ರಯತ್ನ ಸಫಲವಾಗುವುದಿಲ್ಲ ಎಂದರು.ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸ: ರೌಡಿಶೀಟರ್ ಸಮ್ಮುಖದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧೋರಣೆ ಖಂಡನಾರ್ಹ. ಇದು ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸ. ರೌಡಿಶೀಟರ್ ಸಮ್ಮುಖದಲ್ಲೇ ಕೇಂದ್ರ ಸಚಿವರೊಬ್ಬರು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಇನ್‌ಸ್ಪೆಕ್ಟರ್ ಅವರನ್ನು ಪ್ರತ್ಯೇಕವಾಗಿ ಕರೆದು ಹೇಳಬಹುದಿತ್ತು. ಅದನ್ನು ಬಿಟ್ಟು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.