ಕನ್ನಡಪ್ರಭ ವಾರ್ತೆ ಕುಮಟಾ
ಕೋರ್ಟ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಆರಂಭಗೊಂಡ ಮ್ಯಾರಥಾನ್ ಓಟಗಳ ಉತ್ಸವದಲ್ಲಿ ಮೊದಲಿಗೆ ೨೧ ಕಿಮೀ ಓಟ, ನಂತರ ೧೨ ಕಿಮೀ ಓಟ ಹಾಗೂ ಕೆಲ ನಿಮಿಷಗಳ ಅಂತರದಲ್ಲಿ ೫ ಕಿಮೀ ಸೌಹಾರ್ದ ಓಟ(ಫನ್ ರನ್) ಪ್ರಾರಂಭಿಸಲಾಯಿತು. ಓಟದ ಉದ್ದಕ್ಕೂ ಮಾರ್ಗದರ್ಶನ, ಲಘು ಉಪಚಾರ ಹಾಗೂ ಇತರ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶ್ರೀಲಂಕಾದಲ್ಲಿ ಐರನ್‌ಮ್ಯಾನ್ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ಶಿರಸಿಯ ಶಶಿಭೂಷಣ ಹೆಗಡೆ ಇಲ್ಲಿಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನಮ್ಮ ಕರಾವಳಿ ತೀರದಲ್ಲಿ ಮುಂದಿನ ವರ್ಷಗಳಲ್ಲಿ ಐಎಎಫ್ ಪ್ರಮಾಣಿತ ಪೂರ್ಣ ಮ್ಯಾರಥಾನ್ ಆಯೋಜಿಸಬೇಕು. ಕುಮಟಾದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದರು.ಮ್ಯಾರಥಾನ್‌ಗೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದಲ್ಲಿ ಕ್ರೀಡಾ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಕ್ರೀಡಾಂಗಣದಂತಹ ಹೆಚ್ಚಿನ ಸೌಲಭ್ಯ ಒದಗಿಸಲು ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು. ೫ ಕಿಮೀ ಸೌಹಾರ್ದ ಓಟದಲ್ಲಿ ಸ್ವತಃ ಪಾಲ್ಗೊಂಡು ಪೂರ್ಣಗೊಳಿಸಿದರು. ಡಾ. ಜಿ.ಡಿ. ಭಟ್, ಡಾ. ನಮಿತಾ ಸಾರಂಗ, ಅನಿಲ್ ನಾಯ್ಕ, ರೋಟರಿ ಕಾರ್ಯದರ್ಶಿ ನಿಖಿಲ್ ಕ್ಷೇತ್ರಪಾಲ, ಖಜಾಂಚಿ ಗುರುಪ್ರಸಾದ ಕಾಮತ ಇತರರು ಇದ್ದರು.
೨೧ ಕಿಮೀ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಆಕಾಶ ನಾಯ್ಕ ಹಾಗೂ ಗಣಪತಿ ಮಲ್ಲಿಕ್ ಪ್ರಥಮ ಸ್ಥಾನ ಹಂಚಿಕೊಂಡರು. ಜಯಂತ ಪಟಗಾರ ಶಿರಸಿ ಮತ್ತು ಸಂದೀಪ ಪೂಜಾರಿ ದ್ವಿತೀಯ, ದರ್ಶನ ನಾಯ್ಕ ಹಾಗೂ ದಿಲೀಪ ನಾಯ್ಕ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಸೌಮ್ಯಾ ಕಾರವಾರ ಪ್ರಥಮ ಸ್ಥಾನ, ಸುಪ್ರಿಯಾ ಕುಮಟಾ ದ್ವಿತೀಯ ಸ್ಥಾನ ಮತ್ತು ಮಧುಶ್ರೀ ಕುಮಟಾ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದುಕೊಂಡರು.