ಘಟನಾ ಸ್ಥಳಕ್ಕೆ ತೆರಳಿದ ಕೆಲ ಪತ್ರಕರ್ತರು ಪೋಟೊ, ವಿಡಿಯೋ ಮಾಡುವಾಗ ಹಲ್ಲೆಕೋರರು ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಹಲ್ಲೆ ಯತ್ನಿಸಿದ್ದಾರೆ
ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಗೈರು ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣವಿದೆ.
ಪಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಬೆಂಬಲಿಗರ ಗುಂಪೊಂದು ಮೆಡಿಕಲ್ ಸ್ಟೋರ್ ನಲ್ಲಿದ್ದ ಪಪಂ ಸದಸ್ಯ ಅನಿಲ ಬಿಜ್ಜಳ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಂತೆ ಅಕ್ಕಪಕ್ಕದವರು ಬಂದು ಹಲ್ಲೆಕೋರರನ್ನು ತಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪು ಚದುರಿಸಲು ಮುಂದಾದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ಡಿ.ಆರ್ ವಾಹನ ಕರೆ ತಂದು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಗುಂಪು ಚದುರಿಸಿದರು.
ಘಟನಾ ಸ್ಥಳಕ್ಕೆ ತೆರಳಿದ ಕೆಲ ಪತ್ರಕರ್ತರು ಪೋಟೊ, ವಿಡಿಯೋ ಮಾಡುವಾಗ ಹಲ್ಲೆಕೋರರು ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಹಲ್ಲೆ ಯತ್ನಿಸಿದ್ದಾರೆ. ಓರ್ವ ಪತ್ರಕರ್ತನನ್ನು ಎಳೆದಾಡಿದಾಗ ಅಲ್ಲೇ ಇದ್ದ ಪೊಲೀಸರು ರೂಮಿನಲ್ಲಿ ಕೂಡಿ ಹಾಕಿ ಜೀವ ಉಳಿಸಿದ್ದಾರೆ. ಇನ್ನುಳಿದ ವರದಿಗಾರರನ್ನು ಪಪಂ ಸಿಬ್ಬಂದಿಯೊಬ್ಬರು ಹಲ್ಲೆಕೋರರಿಂದ ರಕ್ಷಿಸಿದ್ದಾರೆ.
ಈ ಘರ್ಷಣೆಗೆ ಸಂಬಂಧಿಸಿದಂತೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಆದರೆ, ಪೊಲೀಸರು ಪಟ್ಟಣದಲ್ಲಿ ಬಿಗಿ ಕಾವಲು ಹಾಕಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.