-ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಸಮಾರೋಪ
-----ಕನ್ನಡಪ್ರಭ ವಾರ್ತೆ ಶಹಾಪುರ
ಗ್ರಾಮೀಣ ಪ್ರದೇಶಗಳು ನಮ್ಮ ಸಂಸ್ಕೃತಿಯ ಮೂಲ ನೆಲೆಗಳು. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ವೇಷ ಭೂಷಣ ಇಂದು ಉಳಿದಿರುವುದು ಹಳ್ಳಿಗಾಡಿನಲ್ಲಿ ಮಾತ್ರ. ಗ್ರಾಮೀಣ ಜನರೊಂದಿಗೆ ಬೆರೆತು ಅಲ್ಲಿನ ಸಂಸ್ಕೃತಿಯನ್ನು ಮತ್ತು ಸಮಸ್ಯೆಗಳನ್ನು ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ರಾಜ್ಯಶಾಸ್ತ್ರ ಅಧ್ಯಾಪಕ ಗಂಗಣ್ಣ ಹೊಸಮನಿ ಹೇಳಿದರು. ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್. ‘ಎ’ ಮತ್ತು ‘ಬಿ’ ಘಟಕಗಳಿಂದ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಎನ್.ಎಸ್.ಎಸ್. ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದಿನ ತಮ್ಮ ಸಾಮಾಜಿಕ ಬದುಕಿನ ರೀತಿ-ನೀತಿಗಳನ್ನು ಕಲಿಯುವುದರ ಜೊತೆಗೆ ಸೇವಾ ಮನೋಭಾವನೆ, ಪರಸ್ಪರರ ಅರ್ಥೈಸುವ, ಗೌರವಿಸುವ, ಸಮಸ್ಯೆಗಳಿಗೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿದರು.ಪ್ರಾಂಶುಪಾಲ ಪ್ರೊ. ಶಿವಲಿಂಗಣ್ಣ ಸಾಹು ಮಾತನಾಡಿ, ಎನ್ನೆಸ್ಸೆಸ್ ಘಟಕದ ಮೂಲಕ ಪ್ರಜಾಪ್ರಭುತ್ವ ಮನೋಭಾವ, ಸಹಿಷ್ಣುತೆ ಮನೋಭಾವನೆ, ಸಮಯ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಶಿಸ್ತು, ಧನಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ದೇವಿಂದ್ರಪ್ಪ ಆಲ್ದಾಳ, ಸಂಗಣ್ಣ ದಿಗ್ಗಿ, ಸತೀಶ ತುಳೇರ, ಮಾನಯ್ಯ ಗೌಡಗೇರಾ ಹಾಗೂ ಎನ್.ಎಸ್.ಎಸ್. ‘ಎ’ ಘಟಕ ಅಧಿಕಾರಿ ರಾಘವೇಂದ್ರ ಹಾರಣಗೇರಾ, ಎನ್.ಎಸ್.ಎಸ್. ‘ಬಿ’ ಘಟಕ ಅಧಿಕಾರಿ ಭೀಮಪ್ಪ ಭಂಡಾರಿ ಇದ್ದರು. ಶಿಬಿರಾರ್ಥಿಗಳು ತಮ್ಮ ವಿವಿಧ ಕೌಶಲ್ಯಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.----
16ವೈಡಿಆರ್5: ಶಹಾಪುರದ ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಗಳು ನಡೆದವು.------