ಶಿಕ್ಷಕಿ ಗೀತಾ ಅಭಿಪ್ರಾಯ । ಯಲಗುಡಿಗೆ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬೇಸಿಗೆ ರಜೆಯಲ್ಲಿ ನಗರ ಪ್ರದೇಶದ ಮಕ್ಕಳು ಬೇಸಿಗೆ ಶಿಬಿರದಲ್ಲಿ ಪುಸ್ತಕ ಬಿಟ್ಟು ಹೊಸತು ಕಲಿಯಲು ಬಯಸುತ್ತಾರೆ. ಆ ಮಕ್ಕಳಿಗೆ ಪೋಷಕರ ಬೆಂಬಲವೂ ಇರುತ್ತದೆ. ಆದರೆ ನಮ್ಮ ಗ್ರಾಮೀಣ ಭಾಗದ ಮಕ್ಕಳ ಪರಿಸ್ಥಿತಿ ಹಾಗೆ ಇರುವುದಿಲ್ಲ. ನಮ್ಮ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರದ ಅವಕಾಶಗಳು ಸಿಗಬೇಕು ಎಂದು ಯಲಗುಡಿಗೆ ಶಾಲೆಯ ಶಿಕ್ಷಕಿ ಕೆ.ಎಚ್.ಗೀತಾ ಹೇಳಿದರು.
ತಾಲೂಕಿನ ಯಲಗುಡಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 12 ದಿನಗಳ ಕಾಲದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳು ಬ್ಯಾಗ್, ಪುಸ್ತಕದ ಹೊರೆ ಇಲ್ಲದೆ ಶಾಲೆಗೆ ಬಂದು ಓರೆಗಾಮಿ, ಕ್ಲೇ ಮಾಡಲ್, ಚಿತ್ರಕಲೆ, ರಂಗಗೀತೆ, ಲಾವಣಿ, ಮುಖವಾಡ ತಯಾರಿಕೆ, ವಿನೋದ ಆಟಗಳು, ಪಲ್ಪಿಂಗ್ ವರ್ಕ್, ಹ್ಯಾಂಡ್ ರೈಟಿಂಗ್ ವರ್ಕ್ ಮೊದಲಾದ ಹೊಸ ಹೊಸ ವಿಷಯಗಳನ್ನು ಕಲಿತುಕೊಂಡು ಹೋಗಬೇಕು. ಆ ಮೂಲಕ ಬೇಸಿಗೆ ರಜೆಯ ಸದುಪಯೋಗ ಆಗಬೇಕು ಎನ್ನುವ ಕಾರಣಕ್ಕೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.
ಹನ್ನೆರಡು ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಾಗ್ಮಿ ನಾಗಶ್ರೀ ತ್ಯಾಗರಾಜ್, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ವಿಜಯಕುಮಾರ್, ಚಿತ್ರಕಲಾ ಶಿಕ್ಷಕರಾದ ಸತ್ಯಪ್ರಕಾಶ್, ನಾಗರಾಜ್, ವಾಣಿ, ನಾಮದೇವ ಕಾಗದಗಾರ ಭಾಗವಹಿಸಲಿದ್ದಾರೆ. ಯಲಗುಡಿಗೆ ಗ್ರಾಮದ ಮಕ್ಕಳು ಮಾತ್ರವಲ್ಲದೆ ಸುತ್ತಮುತ್ತಲಿನ ಜನವಸತಿ ಪ್ರದೇಶದ ಮಕ್ಕಳು ಬೇಸಿಗೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಯಲಗುಡಿಗೆ ಶಾಲೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಬೇಕು ಎನ್ನುವುದು ನಮ್ಮ ಬಹುದಿನಗಳ ಕನಸಾಗಿತ್ತು. ಆ ಕನಸಿಗೆ ಸಹಕಾರ ನೀಡುತ್ತಿರುವವರು ಬೆಂಗಳೂರಿನ ಇಂಡಿಯಾ ಸುಧಾರ್ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ಸದಸ್ಯರಿಗೆ ಹಾಗೂ ಬೇಸಿಗೆ ಶಿಬಿರದ ಆಯೋಜನೆಗೆ ಸಹಕಾರ ನೀಡಿದ ಎಸ್‌ಡಿಎಂಸಿಗೆ ಧನ್ಯವಾದ ಎಂದರು.
ಸತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಯಲಗುಡಿಗೆ ಹೊನ್ನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ವೆಂಕಟೇಶ್, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಿಕ್ಕಮಗಳೂರಿನ ಹಿರೇಕೊಳಲೆಯ ಮುಖ್ಯ ಶಿಕ್ಷಕ ಅಣ್ಣಾ ನಾಯ್ಕ, ಹೆಡೆದಾಳು ಶಾಲೆಯ ಶಿಕ್ಷಕಿ ವಿಮಲಾಕ್ಷಿ, ಅಡುಗೆ ಸಹಾಯಕರಾದ ರೂಪಿಣಿ ಇದ್ದರು.