ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನದ ಲಾಭ ದೊರೆಯುವಂತಾಗಬೇಕು

KannadaprabhaNewsNetwork | Published : Dec 11, 2023 1:15 AM

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಚಂದನ ಶಾಲೆಯಲ್ಲಿ ಸೋಮವಾರದಿಂದ 3 ದಿನಗಳ ಕಾಲ ನಡೆಯುತ್ತಿರುವ ವಿಜ್ಞಾನ ವಿಸ್ತೃತ ಕಾರ್ಯದಲ್ಲಿ ಚಂದನ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ವರ್ಚುವಲ್ ಮೂಲಕ ಬೆಂಗಳೂರಿನಿಂದ ಪ್ರೊ. ಇಂದುಮತಿ ಸಿಎನ್‌ಆರ್ ರಾವ್ ಮಾತನಾಡಿದರು.

ವಿಜ್ಞಾನ ವಿಸ್ತ್ರತ ಕಾರ್ಯಕ್ರಮದ ನಿಮಿತ್ತ ವರ್ಚುವಲ್‌ ಮೂಲಕ ಮಾತನಾಡಿದ ಪ್ರೊ. ಇಂದುಮತಿ

ಲಕ್ಷ್ಮೇಶ್ವರ: ದೇಶದ ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ತಂತ್ರಜ್ಞಾನದ ಅಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ವಿಜ್ಞಾನದ ಹಾಗೂ ತಂತ್ರಜ್ಞಾನದ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂದು ಪ್ರೊ. ಇಂದುಮತಿ ಸಿಎನ್‌ಆರ್ ರಾವ್ ಹೇಳಿದರು.

ಪಟ್ಟಣದ ಚಂದನ ಶಾಲೆಯಲ್ಲಿ ಸೋಮವಾರದಿಂದ 3 ದಿನಗಳ ಕಾಲ ನಡೆಯುತ್ತಿರುವ ವಿಜ್ಞಾನ ವಿಸ್ತೃತ ಕಾರ್ಯದಲ್ಲಿ ಚಂದನ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ವರ್ಚುವಲ್ ಮೂಲಕ ಬೆಂಗಳೂರಿನಿಂದ ಅವರು ಮಾತನಾಡಿದರು.ವಿಜ್ಞಾನವು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದೆ, ಆಧುನಿಕ ತಂತ್ರಜ್ಞಾನವು ಮನುಕುಲದ ಒಳಿತಿಗಾಗಿ ಹೋರಾಡುವ ಶಕ್ತಿಶಾಲಿ ಸಾಧನವಾಗಬೇಕು, ಗ್ರಾಮೀಣ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎನ್ನುವುದು ನಮ್ಮೇಲ್ಲರ ಉದ್ದೇಶವಾಗಿದೆ. ಚಂದನ ಶಾಲೆಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ವಿಜ್ಞಾನದ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಸೌಲಭ್ಯವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಟ್ಟಿರುವುದು ನಮಗೆ ಹೆಮ್ಮಯ ಸಂಗತಿಯಾಗಿದೆ ಎಂದು ಹೇಳಿದರು.ಈ ವೇಳೆ ಇಸ್ರೋದ ಹಿರಿಯ ವಿಜ್ಞಾನಿ ಜಿ.ವಿ. ಕುಲಕರ್ಣಿ ಮಾತನಾಡಿ, ಚಂದನ ಶಾಲೆಯಲ್ಲಿ 3 ದಿನಗಳ ಕಾಲ ನಡೆಯುತ್ತಿರುವ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡು ವಿಜ್ಞಾನದಲ್ಲಿ ಉನ್ನತ ಸಾಧನೆ ಮಾಡಬೇಕು, ಪ್ರತಿನಿತ್ಯ ಜಗತ್ತಿನಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು ಅವುಗಳು ಮನುಷ್ಯನ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಹೇಳಿದರು. ಕರ್ನಾಟಕದ ಉನ್ನತ ಶಿಕ್ಷಣ ಸಮಿತಿಯ ಮಾಜಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ವಿಜ್ಞಾನವು ಜಗತ್ತಿನಲ್ಲಿರುವ ಎಲ್ಲರ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುವ ಕಾರ್ಯ ಮಾಡುತ್ತಿದೆ. ಎಲ್ಲರ ಮೊಗದಲ್ಲಿ ಮಂದಹಾಸ ನೋಡುವುದು ವಿಜ್ಞಾನದ ಗುರಿಯಾಗಿದೆ ಎಂದು ಹೇಳಿದರು.ಈ ವೇಳೆ ಈಶ್ವರಮೂರ್ತಿ, ಪ್ರೊ. ಶಿಬಾ ವಾಸು, ಪ್ರೊ. ಎಸ್.ಎನ್. ವಿದ್ಯಾಧಿರಾಜ, ಪ್ರೊ, ಟಿಮೊಥೋ ಫಿಶರ್, ಪ್ರೊ. ಜಾನ್ ಪಿ. ಪ್ರೊ. ಕ್ಲಾಂಡಿಯಾ. ಪ್ರೊ. ವಸಂತ ಕಾಮತ್, ಪ್ರೊ. ಜಾನ್ ಝಾಮ್ ಪ್ರೊ..ಅರುಣ ಪಂಚಕೇಶವನ್, ಪ್ರೊ. ರಾಧಾ ಬಾಯ್, ಪ್ರೊ. ಜಯಶ್ರೀ ಸಾವಂತ ಭಟ್ ಹಾಗೂ ಪ್ರೊ. ಜಯಚಂದ್ರನ್ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿನ ನ್ಯಾನೋ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಅಣು ವಿಜ್ಞಾನ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು. ಚಂದನ ಶಾಲೆಯ ಸಂಸ್ಥಾಪಕ ಟಿ. ಈಶ್ವರ, ಎಚ್‌.ಸಿ.ರಟಗೇರಿ, ಗಿರಿಜಾ ಈಶ್ವರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಚಂದನ ಶಾಲೆಯ ವಿದ್ಯಾರ್ಥಿ ವರ್ಷಾ ಸ್ವಾಗತಿಸಿದರು. ಪ್ರಿಯಾಂಕಾ ನಿರೂಪಿಸಿರು. ವಚನಾ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಇಂದುಮತಿ ರಾವ್ ಅವರ 85ನೇ ಹುಟ್ಟು ಹಬ್ಬವನ್ನು ವರ್ಚುವಲ್ ಮೂಲಕ ಆಚರಿಸಿ ಶುಭ ಕೋರಿದರು.

Share this article