ಬಯಲು ಸೀಮೆ ವ್ಯಾಪ್ತಿಗೆ ಬರುವ ನರಗುಂದ ಪ್ರದೇಶದ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಕೆರೆಗಳನ್ನು ಹೆಚ್ಚಾಗಿ ಅವಲಂಬಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಪಂಯವರು ಕೆರೆಗಳನ್ನು ಸಂರಕ್ಷಣೆ ಮಾಡದ್ದರಿಂದ ಅವನತಿಯತ್ತ ಸಾಗುತ್ತಿವೆ.
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ
ಬಯಲು ಸೀಮೆ ವ್ಯಾಪ್ತಿಗೆ ಬರುವ ನರಗುಂದ ಪ್ರದೇಶದ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಕೆರೆಗಳನ್ನು ಹೆಚ್ಚಾಗಿ ಅವಲಂಬಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಪಂಯವರು ಕೆರೆಗಳನ್ನು ಸಂರಕ್ಷಣೆ ಮಾಡದ್ದರಿಂದ ಅವನತಿಯತ್ತ ಸಾಗುತ್ತಿವೆ.
ನರಗುಂದ ಪಟ್ಟಣ ಹಾಗೂ ತಾಲೂಕಿನ 13 ಗ್ರಾಮಗಳು ಈ ಹಿಂದೆ ಕುಡಿಯುವ ನೀರಿಗೆ ಈ ಕೆರೆಗಳನ್ನೇ ಅವಲಂಬಿಸಿದ್ದವು. ಆದರೆ ಕಳೆದ ಹಲವು ವರ್ಷಗಳ ಹಿಂದೆ ಜಲಜೀವನ ಮಿಷಿನ್ ಅಡಿಯಲ್ಲಿ ಸರ್ಕಾರ ಈ ತಾಲೂಕಿನಿಂದ 30 ಕಿಮೀ ದೂರದಲ್ಲಿರುವ ಮಲಪ್ರಭಾ ಜಲಾಶಯದಿಂದ ಪೈಪ್ ಲೈನ್ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆ ಪ್ರಾರಂಭ ಮಾಡಿತು. ನಂತರ ಪುರಸಭೆಯವರು ಮತ್ತು ಗ್ರಾಪಂಯ ಅಧಿಕಾರಿಗಳು ಈ ಕೆರೆಗಳ ಪುನಃಶ್ಚೇತನ ಮಾಡದ್ದರಿಂದ ಎಲ್ಲ ಕೆರೆಗಳು ಪಾಳು ಬಿದ್ದಿವೆ.
ವಿಷಜಂತುಗಳ ತಾಣ:
ಕಳೆದ 10ರಿಂದ 15 ವರ್ಷದಿಂದ ಸರ್ಕಾರ ಕೆರೆಗಳ ಪುನಃಶ್ಚೇತನ ಮಾಡಲು ಅನುದಾನ ನೀಡದ್ದರಿಂದ ನಿರ್ವಹಣೆ, ಸಂರಕ್ಷಣೆಯ ಕೊರತೆಯಿಂದ ಕೆರೆಗಳಲ್ಲಿ ಇಂದು ಜಾಲಿ ಕಂಟಿ ಬೆಳೆದು ವಿಷ ಜಂತುಗಳು ಓಡಾಡುತ್ತಿವೆ.
ಬಹಿರ್ದೆಸೆಗೆ ಬಳಕೆ:
ಈಗಾಗಲೇ ಸರ್ಕಾರ ಜನರು ಬಯಲು ಶೌಚ ಪ್ರದೇಶ ನಿರ್ಮಾಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ಪ್ರತಿ ಕುಟುಂಬಕ್ಕೆ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ಆದರೂ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಸುತ್ತಲಿನ ಬಯಲು ಪ್ರದೇಶ ಮತ್ತು ಕೆರೆ ದಂಡೆಗಳ ಮೇಲೆ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಹಾಗಾಗಿ ಪರಿಸರವೂ ಹಾಳಾಗುತ್ತಿದೆ.
ಪುರಸಭೆ ಮತ್ತು ಗ್ರಾಪಂಯವರು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳ ಆಸ್ತಿ ಬಗ್ಗೆ ನಿರಾಸಕ್ತಿ ತೋರಿದ್ದರಿಂದ ಕೆಲವೆಡೆ ಕೆರೆಯ ಸುತ್ತಮುತ್ತ ವಾಸಿಸುವ ಜನರು ಕೆರೆಯ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ.
ಈ ತಾಲೂಕಿನಲ್ಲಿ ಪುರಸಭೆ ಮತ್ತು ಗ್ರಾಪಂಯಲ್ಲಿ 50ರಿಂದ 60 ಕೆರೆಗಳಿವೆ. ಈ ಕೆರೆಗಳ ಸಂರಕ್ಷಣೆಗೆ ಈಗಲೇ ಸರ್ಕಾರ ಮುಂದಾಗದಿದ್ದರೆ, ಇನ್ನು ಸ್ವಲ್ಪ ದಿವಸಕ್ಕೆ ಈ ಎಲ್ಲ ಕೆರೆಗಳು ಮಾಯವಾದರೂ ಅಚ್ಚರಿಪಡುವಂತಿಲ್ಲ.ನಾನು ಈ ಹಿಂದೆ ಜಿಪಂ ಅಧ್ಯಕ್ಷನಾಗಿದ್ದಾಗ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ತಾಲೂಕಿನ ಎಲ್ಲ ಕೆರೆಗಳ ಹೂಳು ತೆಗೆಯಲು ಪ್ರಯತ್ನಿಸಿದ್ದೆ. ಮುಂದಿನ ದಿನಗಳಲ್ಲಿ ಸರ್ಕಾರ ಸಂರಕ್ಷಣೆಗೆ ಮುಂದಾಗವ ಅವಶ್ಯವಿದೆ ಎನ್ನುತ್ತಾರೆ ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ.
ಪಟ್ಟಣದಲ್ಲಿರುವ ಎಲ್ಲ ಕೆರೆಗಳಿಗೆ ಭೇಟಿ ನೀಡಿ ಅವುಗಳನ್ನು ಸ್ವಚ್ಛ ಮಾಡಲು ಕ್ರಿಯಾ ಯೋಜನೆ ಮಾಡಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಸುಭಾಸ ಖುದಾನಪುರ.
ಈಗಾಗಲೇ ಸರೋವರ ಸ್ವಚ್ಛತೆ ಎನ್ನುವ ಕಾರ್ಯಕ್ರಮದಲ್ಲಿ ಗ್ರಾಮೀಣ ಕೆರೆಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೆರೆಗಳ ಪುನಃಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ತಾಪಂ ಇಒ ಶ್ರೀಧರ ಚಿನಗುಂಡಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.