ಬದುಕಿಗೆ ಆತ್ಮವಿಶ್ವಾಸ ಮೂಡಿಸುವ ಕ್ರೀಡೆಗಳು ಆರೋಗ್ಯ ಸೂತ್ರವೂ ಆಗಿದ್ದು, ವಿದ್ಯಾರ್ಥಿಗಳು ಪಾಠದೊಂದಿಗೆ ಆಟಕ್ಕೂ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಹಾನಗಲ್ಲ: ಬದುಕಿಗೆ ಆತ್ಮವಿಶ್ವಾಸ ಮೂಡಿಸುವ ಕ್ರೀಡೆಗಳು ಆರೋಗ್ಯ ಸೂತ್ರವೂ ಆಗಿದ್ದು, ವಿದ್ಯಾರ್ಥಿಗಳು ಪಾಠದೊಂದಿಗೆ ಆಟಕ್ಕೂ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಾನಗಲ್ಲ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾರೀರಿಕ ಕ್ಷಮತೆಗೆ ಕ್ರೀಡೆಗಳು ಅತ್ಯಂತ ಸಹಕಾರಿ. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಂತಹ ಹವ್ಯಾಸಗಳಲ್ಲಿ ಕ್ರೀಡೆ ಅತ್ಯಂತ ಪ್ರಮುಖವಾದುದು. ರಾಜ್ಯ ಸರ್ಕಾರ ಕ್ರೀಡಾಪಟುಗಳಿಗಾಗಿಯೇ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಅವಕಾಶ ನೀಡಿದೆ. ಕ್ರೀಡೆಯನ್ನು ಸ್ಪರ್ಧೆಯಾಗಿ ಒಂದೆಡೆ ಸ್ವೀಕರಿಸಿದರೆ, ಇನ್ನೊಂದೆಡೆ ಎಲ್ಲರೂ ಕೂಡಿ ಆಡಿ ಸಂತಸಪಡುವ ಒಂದು ಆಟವಾಗಿ ಸ್ವೀಕರಿಸಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಡಿ. ನಾಗೇಂದ್ರಪ್ಪ ಕ್ರೀಡಾಜ್ಯೋತಿ ಬೆಳಗಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಿ.ಎನ್. ಸಮಗೂರ, ಎಫ್.ವಿ. ಹಾದಿಮನಿ, ಪಾಂಡುರಂಗ ನಾಗೋಜಿ, ಬಿ.ಎನ್. ಕರೆಪ್ಯಾಟಿ, ಎಸ್.ವಿ. ಬೂದಿಹಾಳ, ಎಲ್.ಬಿ. ಉಗಳವಾಡ ಮೊದಲಾದವರು ಇದ್ದರು.
ಹಾನಗಲ್ಲ ತಾಲೂಕಿನ ಪ್ರೌಢಶಾಲೆ ವಿಭಾಗದ ೧೦ ಅಂತರ್ ವಲಯಗಳ ೮೦೦ ವಿದ್ಯಾರ್ಥಿಗಳು, ಪ್ರಾಥಮಿಕ ವಿಭಾಗದ ೬ ಅಂತರ್ ವಲಯದ ೬೦೦ ವಿದ್ಯಾರ್ಥಿಗಳು ಗುಂಪು ಹಾಗೂ ವೈಯಕ್ತಿಕ ಆಟಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.