ವರದಿಗಾರರು ಕಳುಹಿಸಿದ ಗುಣಮಟ್ಟದ ಹಾಗೂ ನಂಬಿಕೆಗೆ ಅರ್ಹವಾದ ಸುದ್ದಿಗಳನ್ನು ಪರಿಶೀಲಿಸಿ ಪ್ರಕಟಿಸುವ ಗುರುತರವಾದ ಜವಾಬ್ದಾರಿ ಸಂಪಾದಕರ ಮೇಲಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.

ರಾಣಿಬೆನ್ನೂರು: ವರದಿಗಾರರು ಕಳುಹಿಸಿದ ಗುಣಮಟ್ಟದ ಹಾಗೂ ನಂಬಿಕೆಗೆ ಅರ್ಹವಾದ ಸುದ್ದಿಗಳನ್ನು ಪರಿಶೀಲಿಸಿ ಪ್ರಕಟಿಸುವ ಗುರುತರವಾದ ಜವಾಬ್ದಾರಿ ಸಂಪಾದಕರ ಮೇಲಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.

ನಗರದ ಶ್ರೀ ತರಳಬಾಳು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಸ್ಥಳೀಯ ಶಿಡ್ಲು ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಪತ್ರಿಕಾ ಸಂಪಾದಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಕಲುಷಿತ ವ್ಯವಸ್ಥೆಯಲ್ಲಿ ಪತ್ರಕರ್ತರು ಮತ್ತು ಸಂಪಾದಕರು ಸತ್ಯವಾದ ಸುದ್ದಿಗಳ ಜತೆಗೆ ನಿಖರವಾದ, ತಾಜಾ ಸುದ್ದಿಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಪತ್ರಕರ್ತರಾದವರು ದುರುದ್ದೇಶಪೂರಿತ ಹಾಗೂ ಯಾವುದೇ ಪ್ರಭಾವ, ಆಮಿಷಕ್ಕೆ ಒಳಗಾಗದೆ ಪತ್ರಿಕೆಗಳಲ್ಲಿ ನೈಜ ಸುದ್ದಿಗಳನ್ನು ನೀಡುವ ಜವಾಬ್ದಾರಿ ರೂಢಿಸಿಕೊಳ್ಳಬೇಕು ಎಂದರು.

ರಾಜ್ಯಮಟ್ಟದ ಒಂದು ಪತ್ರಿಕೆಯನ್ನು ಪ್ರಕಟಿಸಲು ಎಲ್ಲ ವೆಚ್ಚ ಸೇರಿ ಸುಮಾರು ₹16 ತಗಲುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಪತ್ರಿಕೆಗಳ ಮಾಲೀಕರುಗಳು ಇನ್ನೊಂದು ರೂಪದಲ್ಲಿ ಆದಾಯವನ್ನು ಈ ಪತ್ರಿಕೆಗಳಿಗೆ ಕ್ರೋಡೀಕರಿಸಿ ಅದನ್ನು ಜನಸಾಮಾನ್ಯರಿಗೆ ಹಾಗೂ ಓದುಗರಿಗೆ ₹6-7 ವರೆಗೆ ನೀಡುವಂತಹ ಪರಿಸ್ಥಿತಿ ಇಂದು ಎದುರಾಗಿದೆ ಎಂದರು.

ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಪತ್ರಿಕೆಗಳು ವಸ್ತು ನಿಷ್ಠ ಹಾಗೂ ವಾಸ್ತವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಜನಸಾಮಾನ್ಯರಿಗೆ ಸುದ್ದಿಗಳನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಮಾತನಾಡಿ, ಇಂದಿನ ಕಲಿಯುಗ ಹಾಗೂ ವೈಜ್ಞಾನಿಕ ಯುಗದಲ್ಲಿ ಜನರು ಸುಳ್ಳು ಸುದ್ದಿಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವ ಮಾಹಿತಿಗಳನ್ನು ಬೇಗ ನಂಬುತ್ತಾರೆ. ಈ ಪ್ರವೃತ್ತಿ ಬದಲಾಗಬೇಕಾಗಿದೆ ಎಂದರು.

ಪತ್ರಕರ್ತ ಎಸ್.ಜಿ. ಮಠದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ. ಜಿ.ಎಚ್. ಇಮ್ರಾಪುರ, ಕನ್ನಡಪ್ರಭ ಪತ್ರಿಕೆಯ ಸಮನ್ವಯ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ರಾಜ್ಯ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಸಂಪಾದಕ ಆರ್.ಜಿ. ಮಹಾನುಭಾವಿಮಠ, ಹಿರಿಯ ಪತ್ರಕರ್ತ ಎಚ್.ಎಸ್. ರಾಮಚಂದ್ರ, ಮಂಜುನಾಥ ಗೌರಕ್ಕಳವರ, ನಗರಸಭಾ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ, ರೇನ್‌ಬೋ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ್ ಸಿ.ಟಿ., ಎಸ್‌ಟಿಜೆಐಟಿ ಮಹಾವಿದ್ಯಾಲಯದ ನಿರ್ದೇಶಕ ಜಂಬುನಾಥ್ ಗುತ್ತಿ, ಪ್ರಾಚಾರ್ಯ ಡಾ. ಬಿ. ಮಹೇಶ್ವರಪ್ಪ ಸೇರಿದಂತೆ ಸಂಪಾದಕರು, ಪತ್ರಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.