ಸ್ತನ್ಯಪಾನದಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಲಭ್ಯ

KannadaprabhaNewsNetwork |  
Published : Aug 08, 2024, 01:33 AM IST
48 | Kannada Prabha

ಸಾರಾಂಶ

ಕುಪ್ಪೇಗಾಲ ಮತ್ತು ಎಂ.ಸಿ. ಹುಂಡಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ತಾಲೂಕಿನ ಕುಪ್ಪೇಗಾಲ ಮತ್ತು ಎಂ.ಸಿ. ಹುಂಡಿ ಗ್ರಾಮದಲ್ಲಿ ನಡೆಯಿತು.

ಸಂಸ್ಥೆಯ ಸಂಯೋಜಕ ಶಶಿಕುಮಾರ್ ಮಾತನಾಡಿ, ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಸಲಾಗುತ್ತದೆ. ಶಿಶುಮರಣ ತಡೆಗಟ್ಟಲು ಹಾಗೂ ಎದೆ ಹಾಲಿನ ಮಹತ್ವ ತಿಳಿಸುವುದು ಈ ಸಪ್ತಾಹದ ಉದ್ದೇಶ. ಹುಟ್ಟಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದರು.

ಎದೆ ಹಾಲು ಅಮೃತಕ್ಕೆ ಸಮಾನ. ಎದೆ ಹಾಲನ್ನು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬುದು ಕೆಲವು ಮಹಿಳೆಯರ ತಪ್ಪು ಕಲ್ಪನೆ ಎಂದು ಹೇಳಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ, ಸ್ತನ್ಯಪಾನವು ಮಗುವಿಗೆ ದೇವರು ಕೊಟ್ಟ ವರವಾಗಿದ್ದು, ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ. ತಾಯಿ ಮಗುವಿಗೆ ಎದೆ ಹಾಲುಣಿಸುವುದರಿಂದ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಮಗುವು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮಗುವಿಗೆ ತಾಯಿಯ ಹಾಲು ಸೋಂಕು ನಿವಾರಕ ಪ್ರಥಮ ಲಸಿಕೆಯಾಗಿದ್ದು, ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚಿಸುವ ಪ್ರಕ್ರಿಯೆಯಾಗಿದೆ ಎಂದರು.

ತಾಯಿ ಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ತಾಯಿಯ ಆರೋಗ್ಯ ಕಾಪಾಡುತ್ತದೆ. ಮಗುವಿಗೆ ಸಂಜೀವಿನಿ ರೂಪದಲ್ಲಿ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿರುತ್ತದೆ. ಉತ್ತಮವಾದ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಇದರಿಂದ ಮಗುವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾದ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ 6 ತಿಂಗಳಾದರೂ ಹಾಲನ್ನು ಕುಡಿಸಬೇಕು ಎಂದು ಅವರು ಹೇಳಿದರು.

ಅಂಗನವಾಡಿ ಮೇಲ್ವಿಚಾರಕಿಯರಾದ ಸುನೀತಾ ಮತ್ತು ಸರೋಜಾ ಮಾತನಾಡಿ, ಸಮುದಾಯ ಶಿಕ್ಷಣಾಧಿಕಾರಿಗಳಾದ ಉಮಾಮಣಿ, ಜ್ಯೋತಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಐಎಸ್‌ ಅಂತಿಮ ಮಹಾ ಯೋಜನೆಗೆ ಅನುಮೋದನೆ ಸಲ್ಲಿಸಿ
ರೈತರ ಹಿತ ಕಾಯುವುದೇ ನನ್ನ ಗುರಿ: ಡಿ.ಕೆ.ಸುರೇಶ್