ಗ್ರಾಮೀಣ ಸೊಗಡು ನಶಿಸಬಾರದು: ಎಂ.ಎನ್. ಹರೀಶ್

KannadaprabhaNewsNetwork | Published : Nov 26, 2024 12:49 AM

ಸಾರಾಂಶ

ವೈಜ್ಞಾನಿಕವಾಗಿ ನಾವು ಪ್ರಗತಿ ಕಾಣುತ್ತಿದ್ದರೂ ಗ್ರಾಮೀಣ ಸೊಗಡು ಸಂಸ್ಕೃತಿ ನಶಿಸಿ ಹೋಗಬಾರದು ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ವೈಜ್ಞಾನಿಕವಾಗಿ ನಾವು ಪ್ರಗತಿ ಕಾಣುತ್ತಿದ್ದರೂ ಗ್ರಾಮೀಣ ಸೊಗಡು ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು ಎಂದು ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್. ಹರೀಶ್ ಅಭಿಪ್ರಾಯ ಪಟ್ಟರು.

ಅವರು ಕೊಡಗು-ಹಾಸನ ಜಿಲ್ಲಾ ಗಡಿಭಾಗದ ಹೊಸೂರು ಗ್ರಾಮದಲ್ಲಿರುವ ಶ್ರೀ ಬೆಟ್ಟದ ಬಸವೇಶ್ವರ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಆರುನೂರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೌಟೆಕಾಯಿ ಜಾತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕೌಟೆಕಾಯಿ ಬಳ್ಳಿ ಹೇರಳವಾಗಿ ಬೆಳೆಯುತ್ತಿತ್ತು. ರೈತರು ಕೌಟೆಕಾಯಿ ಬಳ್ಳಿಯಿಂದ ಸಾವಯವ ಗೊಬ್ಬರ ಮಾಡುತ್ತಿದ್ದರು ಅಲ್ಲದೆ ಕೌಟೆಕಾಯನ್ನು ರೋಗರುಜುನಗಳಿಗೆ ಔಷಧಿಯಾಗಿ ಉಪಯೋಗಿಸುತ್ತಿದ್ದರು. ಆದರೆ ಈಗ ಹಳ್ಳಿಗಳಲ್ಲಿ ವೈಜ್ಞಾನಿಕ ಭರಾಟೆಯಿಂದ ಎತ್ತು ಜಾನುವಾರುಗಳ ಸಾಕಾಣಿಕೆ ಕಮ್ಮಿಯಾಗಿದೆ. ಸಾವಯವ ಗೊಬ್ಬರ ಮರೆಯಾಗಿ ರಸಾಯಿನಿಕ ಗೊಬ್ಬರವನ್ನು ಬಳಸುತ್ತಾರೆ. ಇದರಿಂದ ಕೌಟೆಕಾಯಿ ಸಸ್ಯ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಇಂದು ಹಳ್ಳಿ ಪಟ್ಟಣಗಳಲ್ಲಿ ಮಾಹಿತಿ ತ್ರಂತ್ರಜ್ಞಾನ ಪ್ರಗತಿ ಸಾಧಿಸುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿರುವ ರೈತರು ಅನ್ನದಾತರೆಂಬುವುದನ್ನು ಮರೆಯಬಾರದು ಈ ನಿಟ್ಟಿನಲ್ಲಿ ನಾವೆಲ್ಲಾರೂ ಗ್ರಾಮೀಣ ಸೊಗಡು ರೈತರನ್ನು ಗೌರವಿಸಬೇಕಾಗುತ್ತದೆ ಎಂದರು.

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಮಾತನಾಡಿ, ಹಳ್ಳಿಗಳಲ್ಲಿ ನಡೆಯುವ ಉತ್ಸವ, ಜಾತ್ರೋತ್ಸವ ಮುಂತಾದ ಸಂಸ್ಕೃತಿ ಗ್ರಾಮೀಣ ಭಾಗದ ಸೊತ್ತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವಗಳಿಗೆ ಹಲವಾರು ಅರ್ಥಗಳಿರುತ್ತದೆ. ಈ ದಿಸೆಯಲ್ಲಿ ನೂರಾರು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಭಾಗದ ಆಚಾರ ವಿಚಾರಗಳನ್ನು ಇಂದಿನ ಪೀಳಿಗೆಯವರು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.

ಬೆಂಗಳೂರಿನ ರಾಷ್ಟ್ರೀಯ ಹಾಕಿ ತರಬೇತುದಾರರಾದ ದೇವರಾಜಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ಸಮಾಜ ಬದಲಾಗುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಮಾನವಿಯ ಮೌಲ್ಯ ಉಳಿದುಕೊಂಡಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಉತ್ಸವಗಳು ಇನ್ನು ಜೀವಂತವಾಗಿದೆ ಎಂದರು. ಕ್ರೀಡಾಕ್ಷೇತ್ರಕ್ಕೆ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳ ಕೊಡುಗೆ ಅಪಾರ ನಾನು ಸಹ ಗ್ರಾಮೀಣ ಪ್ರದೇಶದ ಕ್ರೀಡಾಪಟುವಾಗಿದ್ದೇನೆ. ಈ ದಿಸೆಯಲ್ಲಿ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ಪಟುವಾಗುವಂತೆ ಪ್ರೇರೇಪಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಮತ್ತು ಜಾತ್ರಾ ಸಮಿತಿ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದು ಜಾತ್ರಾ ಸಮಿತಿಯ ಹೊಸೂರು ರಮೇಶ್ ಕೌಟೆಕಾಯಿ ಜಾತ್ರೆ ಹಿನ್ನೆಲೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹೊಸೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳ ಮಂಜುನಾಥ್, ಶನಿವಾರಸಂತೆ ಕಾವೇರಿ ವಿದ್ಯಾಸಂಸ್ಥೆಯ ಉಪನ್ಯಾಸಕ ಅಶ್ವಥ್ ದೇವಸ್ಥಾನ ಮತ್ತು ಜಾತ್ರಾ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

ಜಾತ್ರೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿ ವತಿಯಿಂದ ರಾಷ್ಟ್ರೀಯ ಹಾಕಿ ತರಬೇತಿದಾರರಾದ ದೇವರಾಜಮ್ಮ, ತಡಕಲು ಗ್ರಾಮದ ಹಿರಿಯ ನಾಗರಿಕ ಜಿ.ಎ.ನಾಗರಾಜ್, ಕೌಕೋಡಿ ಗ್ರಾಮದ ಹಿರಿಯ ನಾಗರಿಕ ಹೆಚ್.ಎನ್.ಗೋವಿಂದೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶನಿವಾರಸಂತೆ ನಾಟ್ಯ ನಿಲಯಂ ನೃತ್ಯ ಶಾಲೆಯ ಭರತ ನಾಟ್ಯ ಕಲಾವಿದೆಯರಾದ ಗಾನವಿ ಆಚಾರ್ಯ ಮತ್ತು ಜಾಹ್ನವಿ ಆಚಾರ್ಯ ಹಾಗೂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಬೆಟ್ಟದ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಜಾತ್ರೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

Share this article