ಕನ್ನಡಪ್ರಭ ವಾರ್ತೆ ಸೊರಬ
ಜಾನಪದ ಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕಗಳು. ಗ್ರಾಮೀಣರ ಬದುಕು, ಭಾವನೆಗಳನ್ನು ಅಭಿವ್ಯಕ್ತಿಸುವ ಸೃಜನಶೀಲ ಕಲೆಯಾದ ಜನಪದದಿಂದ ನಮ್ಮ ಸಂಸ್ಕೃತಿಕ ಮತ್ತು ಸಾಹಿತ್ಯ ಅರಳಲು ಸಾಧ್ಯವಾಗಿದೆ ಎಂದು ಎಂದು ಉಪನ್ಯಾಸಕ ವಿಜಯಕುಮಾರ ದಟ್ಟೇರ್ ಹೇಳಿದರು.ತಾಲೂಕು ಕಡಸೂರು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಭೂಮಣ್ಣಿ ಬುಟ್ಟಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.
ಜನಪದರು ತಮ್ಮ ಜೀವನಕ್ಕೆ ನೆರವಾಗುವ, ಆಶ್ರಯ ನೀಡುವ ಭೂಮಿಯೂ ಸೇರಿದಂತೆ ತಾವು ಬಳಸುವ ಪ್ರತಿಯೊಂದು ಪರಿಕರಗಳನ್ನು ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ. ಕೃತಜ್ಞತೆಯ ಸಮರ್ಪಣಾ ಭಾವ ಹಲವಾರು ಹಬ್ಬಗಳಲ್ಲಿ, ಆಚರಣೆಗಳಲ್ಲಿ ವ್ಯಕ್ತವಾಗಿರುವುದನ್ನು ಗುರುತಿಸಬಹುದು. ಮನುಷ್ಯನ ಬದುಕಿಗೆ ಪೂರಕವಾದ ಪರಿಸರದ ಪ್ರತಿಯೊಂದು ಸಸ್ಯ, ಜೀವಿಗಳ ಅವಿನಾಭಾವ ಸಂಬಂಧಗಳನ್ನು ಜಾನಪದದಲ್ಲಿ ಕಾಣಬಹುದು ಎಂದರು.ಹಸೆ ಚಿತ್ತಾರ ಕಲಾವಿದ ವಿಶ್ವನಾಥ ಹೆಚ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲೆಯ ಉಳಿವಿಗೆ ಇಂತಹ ಪ್ರದರ್ಶನ ಮುಖ್ಯವಾಗಿದೆ. ಸಂಘ-ಸಂಸ್ಥೆಗಳು ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಜನಪದ ಕಲೆಗೆ ಇನ್ನಷ್ಟು ಪ್ರಾಶಸ್ತ್ಯ ದೊರೆಯುವ ಜೊತೆಗೆ ನಮ್ಮ ಮೂಲ ಸಂಸ್ಕೃತಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯಅತಿಥಿ, ಗ್ರಾಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಆರ್.ಮರಿಯಪ್ಪ, ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜಪ್ಪ, ಜನಪದ ಕಲಾವಿದ ಕೆ.ವಿ. ನಾರಾಯಣಪ್ಪ, ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಕೆ.ಲಿಂಗರಾಜ್, ಗ್ರಾಮದ ಪ್ರಮುಖರಾದ ಶಿರಗುಂಡಿ ಕೆರಿಯಪ್ಪ, ಎಂ.ಕೆರೆಯಪ್ಪ, ಹೆಂಚಿನಮನೆ ರಾಮಪ್ಪ, ಶಿರಗುಂಡಿ ಕಾಳಪ್ಪ, ಈಶ್ವರಪ್ಪ, ನಾಗರಾಜ್, ಮಹೇಶ್, ಪ್ರಭಾಕರ್ ಮೊದಲಾದವರು ಪಾಲ್ಗೊಂಡಿದ್ದರು.ತಾಲೂಕು ಜನಪದ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಅಕ್ಕನ ಬಳಗದ ರೇಣುಕಮ್ಮ ಗೌಳಿ ನಿರ್ಣಾಯಕರಾಗಿ ಪಾಲ್ಗೊಂಡರು. ತಾಲೂಕು ಕಸಾಪ ಅಧ್ಯಕ್ಷ ಪಾಣಿ ಶಿವಾನಂದ ಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಮಿತಿ ಅಧ್ಯಕ್ಷ ಎನ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ 40ಕ್ಕೂ ಹೆಚ್ಚು ಭೂಮಣ್ಣಿ ಚಿತ್ತಾರದ ಬುಟ್ಟಿ ಪ್ರದರ್ಶನಗೊಂಡವು. ಚೌಡಮ್ಮ ನಾಗಪ್ಪ, ಗೌರಮ್ಮ ರಾಜಪ್ಪ, ಕುಸುಮಾ ವಿಶ್ವನಾಥ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಕಸಾಪ ಕಾರ್ಯದರ್ಶಿ ಬಿ. ರಮೇಶ್ ನಿರೂಪಿಸಿದರು. ಶಾಲಾ ಮಕ್ಕಳು, ಗ್ರಾಮಸ್ಥರು ಇದ್ದರು.- - -
-12ಕೆಪಿಸೊರಬ01:
ಸೊರಬ ತಾಲೂಕಿನ ಕಡಸೂರು ಗ್ರಾಮದಲ್ಲಿ ನಡೆದ ಭೂಮಣ್ಣಿ ಬುಟ್ಟಿ ಸಂಭ್ರಮ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಲಾಯಿತು.