ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ದೇಶದಲ್ಲಿ ಖಾಸಗಿ ಸಂಸ್ಥೆಗಳ ಸ್ಪರ್ಧೆ ಇದ್ದರೂ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರ ಸೇವಾ ಮನೋಭಾವನೆಯಿಂದ ಅಂಚೆ ಕಚೇರಿಯನ್ನು ಬಲಪಡಿಸುತ್ತಿದ್ದು ಗ್ರಾಮೀಣ ಭಾಗದ ಜನರಿಗೂ ಅದರ ಸೌಲಭ್ಯ ಸಿಗುವಂತ ಕೆಲಸ ಮಾಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಪಟ್ಟಣದಲ್ಲಿ ಭಾನುವಾರ ಕೇಂದ್ರ ಸರ್ಕಾರ, ಸಂಪರ್ಕ ಸಚಿವಾಲಯ, ಅಂಚೆ ಕಚೇರಿ ಚಿತ್ರದುರ್ಗ ಅಂಚೆ ವಿಭಾಗ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಅನುಧಾನದಡಿಯಲ್ಲಿ ಮಂಜೂರಾದ 1.20 ಕೋಟಿ ವೆಚ್ಚದ ಅಂಚೆ ಕಚೇರಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಂಬೈನಲ್ಲಿ ಆರಂಭಗೊಂಡ ಅಂಚೆ ಕಚೇರಿ ತುಂಬಾ ಮಹತ್ವ ಪಡೆದಿತ್ತು, ಆದರೆ ಬದಲಾದ ಕಾಲಘಟ್ಟದಲ್ಲಿ ಇಂದು ಇಡೀ ಜಗತ್ತು ಜೇಬಿನಲ್ಲಿ ಇರುವಂತಾಗಿದೆ. ಕಾಗದ ಪತ್ರಗಳಿಗಾಗಿ ಕಾದು ಕುಳಿತುಕೊಳ್ಳುತ್ತಿದ್ದ ಜನರು ಇಂದು ಅಂಗೈನಲ್ಲಿ ಎಲ್ಲವನ್ನೂ ಪಡೆಯುತ್ತಿದ್ದಾರೆ. ಇಂತಹ ಸ್ಪರ್ಧಾತ್ಮಕ ಸಮಯದಲ್ಲಿ ಅಂಚೆ ಸೇವೆಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಕೆಲಸ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ. ಪ್ರದಾನಿ ಮೋದಿಯವರು ಅಂಚೆ ಕಚೇರಿಯ ಸೇವೆಯನ್ನು ಸೇವಾ ಮನೋಭಾವನೆ ಎಂದು ಪರಿಗಣಿಸಿ ಉತ್ತೇಜನ ನೀಡಿದ್ದಾರೆ ಎಂದರು.ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಕೇವಲ 150 ಅಂಚೆ ಕಚೇರಿಗಳು ಇದ್ದವು ಇಂದು 1.65 ಲಕ್ಷಕ್ಕೂ ಹೆಚ್ಚಿನ ಕಚೇರಿಗಳು ದೇಶದಲ್ಲಿವೆ. ಯುಪಿಎ ಸರ್ಕಾರದಲ್ಲಿ ಸಾವಿರಾರು ಕೇಂದ್ರಗಳನ್ನು ಮುಚ್ಚಿದರೂ ಮೋದಿಯವರು ಬ್ಯಾಂಕಿಂಗ್, ಆಧಾರ್ ಸೇರಿದಂತೆ ವಿವಿಧ ಸೌಲಭ್ಯ ಸಿಗುವಂತೆ ಮಾಡಿ ಅಂಚೆ ಕಚೇರಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ವಿರುವ ಎಲ್ಲಾ ಸೌಲಭ್ಯಗಳು ಸಿಗುತ್ತಿರುವ ಅಂಚೆ ಕಚೇರಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಅಂಚೆ ಅಧೀಕ್ಷಕಿ ಕೆ.ಆರ್.ಉಷಾ, ಉಪ ಅಧಿಕ್ಷಕ ಬಸವರಾಜ, ಅಂಚೆ ನಿರೀಕ್ಷಕ ಮಂಜುನಾಥ್, ಪ್ರಸನ್ನ ಕುಮಾರ್, ಅಂಚೆ ಸಹಾಯಕರಾದ ಬದ್ರಿ ನಾರಾಯಣ ರಾವ್, ಶ್ರೀಧರ್, ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀರಾಮ ರೆಡ್ಡಿ,ಬಿಜೆಪಿ ನಿಕಟ ಮೂರ್ವ ಅಧ್ಯಕ್ಷ ಡಾ.ಮಂಜುನಾಥ್, ತಾಪಂ ಮಾಜಿ ಸದಸ್ಯ ಟಿ.ರೇವಣ್ಣ ಇದ್ದರು.ಒಳಮೀಸಲು ಜಾರಿ ಮಾಡದಿದ್ದರೆ ದೊಡ್ಡ ಮಟ್ಟದ ಹೋರಾಟ: ಕಾರಜೋಳ
ಸಿಎಂ ಸಿದ್ದರಾಮಯ್ಯ ನೀಡಿರುವ ಕಾಲ ಮಿತಿಯೊಳಗೆ ಪರಿಶಿಷ್ಟ ಜಾತಿಯ ಒಳ ಮೀಸಲು ಜಾರಿ ಮಾಡದಿದ್ದರೆ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ಆರಂಭವಾಗಲಿದೆ. ನೆಪ ಹೇಳುತ್ತಾ ಕಾಲ ದೂಡುವುದು ಬಿಟ್ಟು ಬದ್ಧತೆ ಇದ್ದರೆ ದಿನಾಂಕ ನಿಗದಿಗೊಳಿಸಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲು ಜಾರಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿದೆಯಾದರೂ. ಸಿಎಂ ಸಿದ್ದರಾಮಯ್ಯ ದತ್ತಾಂಶದ ನೆಪದಲ್ಲಿ ಕಾಲಹರಣ ಮಾಡುತ್ತಾ ಮಾದಿಗ ಸಮುದಾಯಕ್ಕೆ ವಂಚನೆ ಮಾಡುತ್ತಿದೆ. ಬದ್ಧತೆ ಇದ್ದರೆ ದಿನಾಂಕ ನಿಗದಿಗೊಳಿಸಿ ಎಂದು ಸವಾಲ್ ಹಾಕಿದರು. ಅಂಬೇಡ್ಕರ್, ಬೋವಿ, ಲಂಬಾಣಿ, ಆದಿ ಜಾಂಬವ ಸೇರಿದಂತೆ ವಿವಿಧ ನಿಗಮಗಳಿದ್ದು, ಸೌಲಭ್ಯಗಳನ್ನು ನೀಡುತ್ತಿದೆ. ಇದರ ಆಧಾರದ ಮೇಲೆ ದತ್ತಾಂಶ ಪಡೆಯಲು ಸಾಧ್ಯವಿದ್ದರೂ ಮುಖ್ಯಮಂತ್ರಿಗಳು ದತ್ತಾಂಶದ ನೆಪದಲ್ಲಿ ಮತ್ತೊಂದು ಸಮೀಕ್ಷೆಗೆ ಹೇಳಿದ್ದಾರೆ. ಇದಕ್ಕೆ 60 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಇದು ಕೇವಲ ಕಾಲಹರಣದ ತಂತ್ರವಷ್ಟೇ. ಸುಳ್ಳು ಹೇಳದೆ ಒಳ ಮೀಸಲಾತಿ ಜಾರಿ ಮಾಡಲು ಒಂದು ದಿನಾಂಕ ನಿಗದಿ ಮಾಡಿ ಇಲ್ಲದಿದ್ದರೆ ರಾಜ್ಯದಲ್ಲಿ ಬಹುದೊಡ್ಡ ಹೋರಾಟಕ್ಕೆ ಕಾರಣರಾಗುತ್ತೀರಿ ಎಂದರು.