ರಾಜಕೀಯ ಕಾರಣಕ್ಕೆ ಬಾಬೂ ಜಗಜೀವನ್ ರಾಮ್‌ಗೆ ಪ್ರಧಾನಿ ಹುದ್ದೆ ಸಿಗಲಿಲ್ಲ: ಪ್ರೊ. ಶರತ್ ಅನಂತಮೂರ್ತಿ

KannadaprabhaNewsNetwork | Published : Apr 7, 2025 1:31 AM

ಸಾರಾಂಶ

Babu Jagjivan Ram did not get the post of Prime Minister due to political reasons: Prof. Sharath Ananthamurthy

-ಬಾಬೂಜಿ 118ನೇ ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪುಷ್ಪನಮನ

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡಾ. ಬಾಬೂ ಜಗಜೀವನ್ ರಾಮ್ ಸ್ವಾತಂತ್ರ್ಯೋತ್ತರ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಅವರಿಗೆ ಪ್ರಧಾನ ಮಂತ್ರಿ ಹುದ್ದೆ ಲಭಿಸದೆ ಹೋಗಿದ್ದರಿಂದ ಅವರ ಘನತೆಯೇನೂ ಕಡಿಮೆಯಾಗಲಿಲ್ಲ. ಆದರೆ, ಪ್ರಧಾನಿಯ ಹುದ್ದೆಯಲ್ಲಿ ಇಂಥಹ ಮೇರು ವ್ಯಕ್ತಿತ್ವದ ನಾಯಕ ದೇಶ ಮುನ್ನೆಡೆಸುವ ಅವಕಾಶವನ್ನು ಕಳೆದುಕೊಂಡದ್ದು ಐತಿಹಾಸಿಕ ಪ್ರಮಾದ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಾ. ಬಾಬೂ ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ಬಾಬೂಜಿ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯ ಕಾರಣಗಳಿಂದಾಗಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಕಳೆದುಕೊಂಡರೂ, ದೇಶದ ಉಪ ಪ್ರಧಾನಿಯಾಗಿ, ರಕ್ಷಣಾ ಸಚಿವರಾಗಿ, ಕಾರ್ಮಿಕ ಸಚಿವರಾಗಿ ಅನನ್ಯ ಕೊಡುಗೆ ನೀಡಿದ್ದಾರೆ. ಎಪ್ಪತ್ತರ ದಶಕದಲ್ಲಿ, ಕೃಷಿ ಕ್ಷೇತ್ರ ಸಂಕಷ್ಟದಲ್ಲಿದ್ದಾಗ ಕೃಷಿ ಇಲಾಖೆಯ ಜವಾಬ್ದಾರಿ ಹೊತ್ತುಕೊಂಡ ಬಾಬೂಜಿ ಅವರು, ಕ್ರಾಂತಿಕಾರಿ ಬದಲಾವಣೆ ತಂದು ಹಸಿರು ಕ್ರಾಂತಿಯ ಹರಿಕಾರರಾದರು.

ಮೂರು ದಶಕಗಳ ಕಾಲ ಕ್ಯಾಬಿನೆಟ್ ಸಚಿವರಾಗಿ ವಿವಿಧ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿ ಭಾರತೀಯ ಸೇನೆಗೆ ನಿರ್ಣಾಯಕ ನಾಯಕತ್ವ ನೀಡಿ ಬಾಂಗ್ಲಾದೇಶದ ಉದಯಕ್ಕೆ ಕಾರಣಕರ್ತರಾದವರು. ಅವರ ನಾಯಕತ್ವ, ಆಡಳಿತ ಕ್ಷಮತೆ ಮತ್ತು ಆದರ್ಶಗಳು ಇಂದಿಗೂ ಎಲ್ಲ ಸಮುದಾಯದ ನಾಯಕರಿಗೆ ಅನುಕರಣೀಯ ಎಂದು ಶ್ಲಾಘಿಸಿದರು.

ಕುಲಸಚಿವ ಎ. ಎಲ್. ಮಂಜುನಾಥ್, ಕೇಂದ್ರದ ಸಂಚಾಲಕ ಪ್ರೊ. ಯಾದವ್ ಬೋಡ್ಕೆ, ಶಿಕ್ಷಣ ನಿಕಾಯದ ಡೀನ್ ಪ್ರೊ. ಜಗನ್ನಾಥ್ ಡಾಂಗೆ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ನಿರಂಜನ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್. ಎಂ. ಆರ್, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

--

ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಯಲ್ಲಿ ಡಾ. ಬಾಬೂ ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ಬಾಬೂಜಿ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪುಷ್ಪನಮನ ಸಲ್ಲಿಸಿದರು.

ಪೋಟೋ: 06ಎಸ್‌ಎಂಜಿಕೆಪಿ01

Share this article