ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಬಗೆಹರಿಸಿ

KannadaprabhaNewsNetwork | Published : Jul 16, 2024 12:36 AM

ಸಾರಾಂಶ

ಗ್ರಾಮೀಣ ಅಂಚೆ ನೌಕರರ ಅಧಿಕ ಕೆಲಸದ ಒತ್ತಡ, ಹೆಚ್ಚು ಸಮಯ ಕೆಲಸ ಮಾಡಿದರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅರಸೀಕೆರೆ ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಗ್ರಾಮೀಣ ಅಂಚೆ ನೌಕರರ ಸಮಾವೇಶದಲ್ಲಿ ಚರ್ಚಿಸಲಾಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗಂಟೆಯ ಲೆಕ್ಕದಲ್ಲಿ ವೇತನ ಸಮಸ್ಯೆಯನ್ನು ಆಲಿಸದ ಅಧಿಕಾರಿಗಳು, ಅಧಿಕ ಕೆಲಸದ ಒತ್ತಡ, ಹೆಚ್ಚು ಸಮಯ ಕೆಲಸ ಮಾಡಿದರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಹಲವು ಸಮಸ್ಯೆಗಳನ್ನು ಭಾನುವಾರ ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಗ್ರಾಮೀಣ ಅಂಚೆ ನೌಕರರ ಸಮಾವೇಶದಲ್ಲಿ ಚರ್ಚಿಸಲಾಯಿತು.

ಗ್ರಾಮೀಣ ಅಂಚೆ ನೌಕರರ ಕೆಲಸವನ್ನ ಲೆವೆಲ್ 1 ಮತ್ತು 2 ಎಂದು ಗುರುತಿಸಲಾಗಿದೆ. ಇದು ನಾಲ್ಕು ಗಂಟೆ ಮತ್ತು 5 ಗಂಟೆ ಕೆಲಸ ಮಾಡುವವರನ್ನು ಹೀಗೆ ವಿಂಗಡಿಸಲಾಗಿದೆ. ನಿಗದಿಗೊಳಿಸಲಾಗಿರುವ ನಾಲ್ಕು ಗಂಟೆಯಲ್ಲಿ ಕೆಲಸಗಳನ್ನ ಮಾಡಲಾಗದೆ 5 ಆಗುತ್ತದೆ, ಅದಕ್ಕೂ ಇನ್ನೂ ಹೆಚ್ಚು ಸಮಯವಾಗುತ್ತದೆ. ಆದರೂ ನಾಲ್ಕು ಗಂಟೆಯನ್ನೇ ಮಾತ್ರ ಪರಿಗಣಿಸಿ ತಿಂಗಳಿಗೆ 15 ಸಾವಿರ ವೇತನ ನೀಡಲಾಗುತ್ತಿದೆ. ನಮ್ಮನ್ನು ಬಿ ಲೆವೆಲ್‌ಗೆ ಪರಿಗಣಿಸಿ ಎಂದು ಮಾಡಿಕೊಂಡ ಮನವಿ ಈಡೇರಿಲ್ಲ. ಇದು ಒಂದು ರೀತಿಯಲ್ಲಿ ಶೋಷಣೆಯಾಗುತ್ತಿದೆ. ಹೀಗೆ ಹತ್ತಾರು ಸಮಸ್ಯೆಗಳನ್ನ ನೊಂದ ನೌಕರರು ಸಭೆಯಲ್ಲಿ ಹಂಚಿಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಜಯಣ್ಣ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಬಹಳ ಮುಖ್ಯ. ಇದಕ್ಕಾಗಿ ನಾವು ಪ್ರತಿ ತಾಲೂಕಿನಲ್ಲಿ ಸಂಘವನ್ನ ರಚಿಸುತಿದ್ದೇವೆ. ಅರಸೀಕೆರೆಯಲ್ಲಿಯೂ ಸಹ ನೂತನ ಅಧ್ಯಕ್ಷರನ್ನು ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿಯೂ ರಚನೆ ಮಾಡಲಾಗುವುದು. ಜಿಲ್ಲಾ ಸಂಘದ ಪದಾಧಿಕಾರಿಗಳು ನೌಕರರ ಸಮಸ್ಯೆ ಪರಿಹಾರಕ್ಕೆ ಪಣ ತೊಟ್ಟಿದ್ದಾರೆ. ಸಮಸ್ಯೆಗಳನ್ನು ಜಿಲ್ಲಾ ಸಂಘಕ್ಕೆ ನೀವು ಬರೆದುಕೊಡಿ. ಅದಕ್ಕೆ ಮುನ್ನ ಅಧಿಕಾರಗಳಲ್ಲಿ ಮನವಿ ಮಾಡಿಕೊಳ್ಳಿ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ಮಾತನಾಡಿ, ಯೂನಿಯನ್ ಬೆಳೆದು ಬಂದ ದಾರಿ, ಸದಸ್ಯರ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಸಂಘದಲ್ಲಿ ಸದಸ್ಯರ ಪಾತ್ರವೇನು, ಯಾವ ಸಮಸ್ಯೆಗಳು ಉದ್ಭವಿಸದರೂ ಒಗ್ಗಟ್ಟಿನಿಂದ ನಾವು ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಮೊದಲಾದ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಸಂಘಟನಾ ಕಾರ್ಯದರ್ಶಿ ರವೀಂದ್ರ, ಗೌರವ ಕಾರ್ಯದರ್ಶಿ ವಿನೋದ್, ನೌಕರರ ಸಮಸ್ಯೆಗಳನ್ನು ಆಲಿಸಿ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದರು. ದುಷ್ಯಂತ್, ಹಾನುಬಾಳು ಸತೀಶ್, ಜಯಕುಮಾರ್ ಪಾಲ್ಗೊಂಡಿದ್ದರು.

Share this article