ಹಂಪಿ: ಕನ್ನಡ ಕಾವ್ಯದ ತೊಟ್ಟಿಲು ಗ್ರಾಮೀಣ ಮಹಿಳೆಯಾಗಿದ್ದು, ಅವರನ್ನು ಗೌರವಿಸುವ ಕೆಲಸ ನಾವು ಮಾಡಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
ಹೆಣ್ಣು ಇಲ್ಲದ ಕುಟುಂಬ ಅಪರಿಪೂರ್ಣ. ಹೆಣ್ಣಿಗಿಂತ ದೊಡ್ಡದು ಯಾವುದು ಇಲ್ಲ. ಕುಟುಂಬದಲ್ಲಿ ಹೆಣ್ಣೇ ಕಣ್ಣು. ಹೆಣ್ಣುಮಕ್ಕಳು ಇದ್ದರೆ ತಂದೆ- ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವುದಿಲ್ಲ. ಹೆಣ್ಣಿನದು ತಾಯಿ ಹೃದಯ. ಸ್ವಾತಂತ್ರ್ಯ ಪೂರ್ವದಲ್ಲಿ ಒಲ್ಲದ ಗಂಡನ ಜತೆಗೆ ಜೀವನ ಮಾಡಿದ ಮಹಿಳೆ, ಗಂಡ ಕೆಟ್ಟವನಾಗಿರಲಿ, ಕುಡುಕನಾಗಿರಲಿ ಎಲ್ಲವನ್ನೂ ಸಹಿಸಿಕೊಂಡು ಅವನ ಜತೆ ಕುಟುಂಬ ಮುನ್ನಡೆಸಿಕೊಂಡು ಹೋದಳು. ತಾಳ್ಮೆಯ ಸಹನೆ ನಮ್ಮ ಹೆಣ್ಣುಮಕ್ಕಳ ಗುಣವಾಗಿದೆ. ಈ ಮಹಿಳಾ ಕವಿಗೋಷ್ಠಿಯಲ್ಲಿ 42 ಕವಯಿತ್ರಿಯರ ಕವನಗಳನ್ನು ವಾಚಿಸುತ್ತಿರುವುದು ಸಂತಸದ ಸಂಗತಿ ಎಂದರು.
ನನ್ನ ಸಾಹಿತ್ಯ ಚಿಂತನೆ ಹಾಗೂ ಭಾಷೆಯ ಸೃಷ್ಟಿಗೆ ಬಳ್ಳಾರಿ ನೆಲ ಕಾರಣ. ನನ್ನ ಕಥೆ, ಕಾದಂಬರಿಗಳಲ್ಲಿ ಮಹಿಳಾ ಧ್ವನಿಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿರುವೆ. ಕವಿಗೆ ಸ್ತ್ರೀತನ ಇಲ್ಲದಿದ್ದರೆ ಒಳ್ಳೆಯ ಲೇಖಕನಾಗಲು ಸಾಧ್ಯವಿಲ್ಲ ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಹಂಪಿ ಉತ್ಸವದಲ್ಲಿ ಹಿಂದಿನ ವರ್ಷದಿಂದ ಕವಿಗೋಷ್ಠಿಯನ್ನು ಪ್ರಾರಂಭಿಸಿದ್ದೇವೆ. ಮಹಿಳಾ ಕವಿಗೋಷ್ಠಿಯಲ್ಲಿ ಅವರ ಚಿಂತನೆಗಳು ಹೊರ ಬರಬೇಕು. ಮಹಿಳೆಯರು ತಮ್ಮ ವಿಚಾರ ವಿನಿಮಯಗಳನ್ನು ಹೊರ ಹಾಕಲು ಇದೊಂದು ಒಳ್ಳೆಯ ವೇದಿಕೆಯಾಗಿದೆ. ತಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಸಮಾಜದಲ್ಲಿ ಬಹುತೇಕ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಹೆಣ್ಣಿನ ಮೇಲೆ ಇನ್ನೂ ಶೋಷಣೆ, ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕಿದೆ. ಹೆಣ್ಣು-ಗಂಡು ಚಹರೆ ಮೂಲಕ ಗುರುತಿಸಬಹುದು, ಆದರೆ ಮಾನಸಿಕವಾಗಿ ಅಲ್ಲ. ವಿದೇಶದಲ್ಲಿ ಮಹಿಳೆಯರು ತುಂಡು ಬಟ್ಟೆ ತೊಟ್ಟರೂ ಅವರ ಮೇಲೆ ದೌರ್ಜನ್ಯ ನಡೆಯುವುದಿಲ್ಲ, ನಮ್ಮ ದೇಶದಲ್ಲಿ ಮಹಿಳೆ ಮೈ ತುಂಬ ಬಟ್ಟೆ ಉಟ್ಟರೂ ಅವಳ ಮೇಲೆ ದೌರ್ಜನ್ಯಗಳು ನಡೆಯುತ್ತದೆ. ಸಮಾಜ ಅವಳನ್ನು ನೋಡುವ ದೃಷ್ಟಿ ಬದಲಾಗಬೇಕಿದೆ ಎಂದು ಹೇಳಿದರು.
ಅಂಕಣ ಬರಹಗಾರರಾದ ಶ್ರೀದೇವಿ ಕೆರೆಮನೆ ಅಧ್ಯಕ್ಷತೆವಹಿಸಿದ್ದರು. ಕಸಾಪದ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಹೊಸಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಾ. ಗುಂಡಿ ಮಾರುತಿ, ಸಾಹಿತಿ ಡಾ. ದಯಾನಂದ ಕಿನ್ನಾಳ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಪ್ರಾಚಾರ್ಯ ನಾಗರಾಜ್ ಹವಾಲ್ದಾರ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್. ಶ್ವೇತಾ, ನಿರೂಪಣಾಧಿಕಾರಿ ಸುಭದ್ರಾದೇವಿ, ಸಿಡಿಪಿಒ ಸಿಂಧು ಯಲಿಗಾರ ಮತ್ತಿತರರಿದ್ದರು.