ಹಾವೇರಿ: ತಾಲೂಕಿನ ಕಾಟೇನಹಳ್ಳಿ ಗ್ರಾಮದ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಎದುರು ರೈತರು ಯೂರಿಯಾ ರಸಗೊಬ್ಬರ ಪಡೆಯಲು ಮಂಗಳವಾರ ಮುಗಿಬಿದ್ದಿದ್ದು, ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು.ಕಾಟೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 30 ಟನ್ ಯೂರಿಯಾ ರಸಗೊಬ್ಬರ ಬಂದಿದ್ದು, ಮಂಗಳವಾರ ಬೆಳಗ್ಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಯಿತು. ಯೂರಿಯಾ ಪೂರೈಕೆ ಮಾಡುವ ಸುದ್ದಿ ಹರಡುತ್ತಿದ್ದಂತೆ ಕಾಟೇನಹಳ್ಳಿ, ಹನುಮನಹಳ್ಳಿ, ತಿಮ್ಮೇನಹಳ್ಳಿ ಗ್ರಾಮಗಳ ನೂರಾರು ರೈತರು ಯೂರಿಯಾ ರಸಗೊಬ್ಬರ ಪಡೆಯಲು ಮುಗಿಬಿದ್ದಿದ್ದರು. ಸೊಸೈಟಿ ಕೇಂದ್ರದ ಎದುರು ಬೆಳಗ್ಗೆ 7 ಗಂಟೆಯಿಂದಲೇ ರೈತರು ಸರದಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 9 ಗಂಟೆಯ ನಂತರ ಗೊಬ್ಬರ ವಿತರಣೆ ಮಾಡುವಾಗ ಕೆಲಹೊತ್ತು ನೂಕುನುಗ್ಗಲು ಉಂಟಾಯಿತು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಆಗಮಿಸಿದ್ದರು. ಸ್ಥಳದಲ್ಲಿ ಗದ್ದಲ ಗಲಾಟೆ, ಮಾತಿನ ಚಕಮಕಿಯೂ ನಡೆದವು. ನಾ ಮುಂದು ತಾ ಮುಂದು ಎಂದು ರೈತರು ನುಗ್ಗುತ್ತಿರುವಾಗ ಪೊಲೀಸರು ಜನದಟ್ಟಣೆ ನಿಯಂತ್ರಿಸುವಲ್ಲಿ ಹರಸಾಹಸ ಪಡುವಂತಾಯಿತು. ಮೂವತ್ತು ಟನ್ ಗೊಬ್ಬರ ಖಾಲಿಯಾಗುವವರೆಗೂ ರೈತರಿಗೆ ತಲಾ ಒಂದು ಖಾತೆಗೆ 3 ಚೀಲ ಯೂರಿಯಾ ಗೊಬ್ಬರವನ್ನು ವಿತರಿಸಲಾಯಿತು.ರಸಗೊಬ್ಬರ ಪೂರೈಸಿ:
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಮೂರ‍್ನಾಲ್ಕು ದಿನಗಳಿಂದ ಮತ್ತೆ ಮಳೆ ಚುರುಕು ಪಡೆದುಕೊಂಡಿದೆ. ರೈತರು ಬೆಳೆದ ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ ಬೆಳೆಗಳಿಗೆ ಮೇಲುಗೊಬ್ಬರ ಹಾಕಲಿಕ್ಕೆ ಯೂರಿಯಾ ಅಗತ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ರೈತರ ಬೇಡಿಕೆಗನುಗುಣವಾಗಿ ಯೂರಿಯಾ ಪೂರೈಸಬೇಕೆಂದು ಕಾಟೇನಹಳ್ಳಿಯ ಸಂತೋಷ ಚನ್ನಗಿರಿ, ಹನುಮಂತ ಮಲ್ಲಾಡದ, ದ್ಯಾಮಣ್ಣ ಮಂಟಗಣಿ, ಕುಮಾರ ಅಳಲಗೇರಿ, ಬಸವರಾಜ ಅಳಲಗೇರಿ ಸೇರಿದಂತೆ ಹಲವು ರೈತರು ಒತ್ತಾಯಿಸಿದ್ದಾರೆ.