ಬೆಳಗಾವಿ ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತ : ಇಬ್ಬರಿಗೆ ಗಾಯ

KannadaprabhaNewsNetwork | Updated : Nov 11 2024, 12:24 PM IST

ಸಾರಾಂಶ

ಬೆಳಗಾವಿ ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಇಬ್ಬರು ಯುವಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

 ಬೆಳಗಾವಿ : ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಇಬ್ಬರು ಯುವಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ನಗರದ ಮರಾಠ ರೆಜಿಮೆಂಟ್‌ನಲ್ಲಿ ನ.7ರಿಂದ ಟಿಎ ಮುಕ್ತ ಸೇನಾ ನೇಮಕಾತಿ ರ್‍ಯಾಲಿ ನಡೆಯುತ್ತಿದ್ದು, 16 ಜಿಲ್ಲೆಗಳ ಯುವಕರಿಗಾಗಿ ಈ ರ್‍ಯಾಲಿ ಆಯೋಜಿಸಲಾಗಿದೆ. ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲು 30 ಸಾವಿರಕ್ಕೂ ಅಧಿಕ ಯುವಕರು ಬೆಳಗಾವಿಗೆ ಆಗಮಿಸಿದ್ದಾರೆ. ಕ್ಲಬ್‌ ರಸ್ತೆಯ ಸಿಪಿಎಡ್‌ ಮೈದಾನದ ಬಳಿ ನಿರೀಕ್ಷೆಗೂ ಮೀರಿ ಯುವಕರು ಆಗಮಿಸಿ ಸರದಿಯಲ್ಲಿ ನಿಂತಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿದೆ. ಪರಿಸ್ಥಿತಿ ಕೈಮೀರುವ ಸ್ಥಿತಿ ತಲುಪಿದಾಗ ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಲಾಠಿಯಿಂದ ತಪ್ಪಿಸಿಕೊಳ್ಳಲು ಯುವಕರು ಓಡಲಾರಂಭಿಸಿದ್ದರಿಂದ ಕಾಲ್ತುಳಿತ ಉಂಟಾಗಿ ಹುಬ್ಬಳ್ಳಿಯ ಅಲ್ಲಾಭಕ್ಷ ಯರಗಟ್ಟಿ ಹಾಗೂ ಗೊಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರವೀಣ್ ಮಕಾಳೆ ಎಂಬ ಯುವಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಗಳಲ್ಲಿಯೇ ಮಲಗಿದ ಯುವಕರು:

ನ.6ರಿಂದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಯುವಕರು ರಾತ್ರಿ ರಸ್ತೆ, ಬಯಲು ಪ್ರದೇಶದಲ್ಲೇ ಮಲಗಿ ರಾತ್ರಿ ಕಳೆದರು. ಮನೆಯಿಂದ ತಂದಿದ್ದ ಬುತ್ತಿಯನ್ನು ಬಿಚ್ಚಿ ರಸ್ತೆಯಲ್ಲೇ ಊಟ ಮಾಡುತ್ತಿರುವ, ಕೆಲವರು ಕೇವಲ ಹಣ್ಣುಗಳನ್ನು ಸೇವಿಸಿ ಹಸಿವು ನೀಗಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.

ಇಂಡಲಗಾ ರಸ್ತೆಯುದ್ದಕ್ಕೂ ಯುವಕರ ಜಾತ್ರೆ:

ಸಹಸ್ರಾರು ಯುವಕರು ರ್‍ಯಾಲಿಗೆ ಆಗಮಿಸಿದ್ದರಿಂದ ಕ್ಲಬ್‌ ರಸ್ತೆಯ ಹರ್ಷ ಹೋಟೆಲ್‌ನಿಂದ ಇಂಡಲಗಾ ಗಣೇಶ ದೇವಸ್ಥಾನದವರೆಗೂ ಯುವಕರ ಜನಜಂಗುಳಿ ಕಂಡುಬಂತು. ಹೀಗಾಗಿ ಪೊಲೀಸರು ಬೆಳಗ್ಗೆಯಿಂದಲೇ ಹರ್ಷ ಹೋಟೆಲ್ ಬಳಿ ಹಾಗೂ ಹಿಂಡಲಗಾ ಗಣೇಶ ದೇವಸ್ಥಾನ ಬಳಿ ರಸ್ತೆಗೆ ಬ್ಯಾರಿಕೇಡ್‌ ಹಾಕಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರು. ಇದರಿಂದ ಈ ಮಾರ್ಗವಾಗಿ ಹೋಗುವ ವಾಹನ ಸವಾರರು ಪರದಾಡುವಂತಾಯಿತು. ಹಿಂಡಲಗಾ ಕಡೆಗೆ ಹೋಗುವ ವಾಹನ ಸವಾರರು ಗಣೇಶಪುರ, ಹನುಮಾನ ನಗರ ರಸ್ತೆಗಳ ಮೂಲಕ ಸಂಚಾರ ನಡೆಸಿದರು.

ಊರಿಗೆ ವಾಪಸ್ಸಾದ ಯುವಕರು:

ರ್‍ಯಾಲಿ ವೇಳೆ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಬೀಸಿದ್ದರಿಂದ ಕಾಲ್ತುಳಿತ ಘಟನೆ ನಡೆದಿದ್ದರಿಂದ ಸಹಸ್ರಾರು ಯುವಕರು ರ್‍ಯಾಲಿಯಲ್ಲಿ ಪಾಲ್ಗೊಳ್ಳದೇ ಭಾನುವಾರ ಬೆಳಗ್ಗೆಯೇ ಊರುಗಳತ್ತ ಪ್ರಯಾಣ ಬೆಳೆಸಿದರು.

Share this article