ಕನ್ನಡಪ್ರಭ ವಾರ್ತೆ ಭಾರತೀನಗರ
ಎಸ್.ಐ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಫೆ.7ರಂದು ನಿಗಧಿಯಾಗಿದ್ದರೂ ಚುನಾವಣಾಧಿಕಾರಿ ತಡವಾಗಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ನಿರ್ದೇಶಕರು ಸಂಘದ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.ಫೆ.7ರಂದು ಡೇರಿ ಅಧ್ಯಕ್ಷ- ಉಪಾಧ್ಯಕ್ಷರ ನಾಮಪತ್ರ ಸಲ್ಲಿಕೆ ಬೆಳಗ್ಗೆ 10ರಿಂದ 12ರ ವರೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಚುನಾವಣಾಧಿಕಾರಿ ವೆಂಕಟೇಶ್‌ಮೂರ್ತಿ ಅವರು 11.32ಕ್ಕೆ ಕಚೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿದ್ದಾರೆ.
ಚುನಾವಣಾಧಿಕಾರಿ ಬೇಜಾವಾಬ್ದಾರಿ ತನದಿಂದ ಮತ್ತು ಯಾರದೋ ಒತ್ತಡದಿಂದ ಮಣಿದು ತಡವಾಗಿ ಬಂದಿದ್ದಾರೆಂದು ಗ್ರಾಮಸ್ಥರು ದೂರಿದರು. ಚುನಾವಣಾಧಿಕಾರಿ ವೆಂಕಟೇಶ್‌ಮೂರ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೇಲಾಧಿಕಾರಿಗಳನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ನಿರ್ದೇಶಕರಾದ ಕೆಂಪೇಗೌಡ, ವೆಂಕಟೇಶ್, ತಾಯಮ್ಮ, ಚಿಕ್ಕಸ್ವಾಮಿ, ಕೆಂಪರಾಜು, ಮುಖಂಡರಾದ ಮಾದೇಗೌಡ, ಪುನೀಲ್‌ಕುಮಾರ್, ರಾಜು, ರವಿ, ಶಿವಣ್ಣ, ಅರುಣ, ಪುಟ್ಟಸ್ವಾಮಿ, ದೇವರಾಜು, ರೇವಣ್ಣಸ್ವಾಮಿ, ಅಶೋಕ್ ಸೇರಿದಂತೆ ಹಲವರಿದ್ದರು.
ದೊಡ್ಡ ಅರಸಿನಕೆರೆ ಎಂಪಿಸಿಎಸ್ ಅಧ್ಯಕ್ಷರಾಗಿ ಪ್ರದೀಪ್ ಆಯ್ಕೆಭಾರತೀನಗರ: ದೊಡ್ಡ ಅರಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಸಿ.ತಮ್ಮಣ್ಣ ಬೆಂಬಲಿಗ ಡಿ.ಎಲ್.ಪ್ರದೀಪ್, ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷ ಡಿ.ಎಂ.ಮಂಚೇಗೌಡ, ಉಪಾಧ್ಯಕ್ಷೆ ಮಂಗಳಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆದು ಪ್ರದೀಪ್ ಹಾಗೂ ಭಾಗ್ಯಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ನೂತನ ಅಧ್ಯಕ್ಷ ಡಿ.ಎಲ್.ಪ್ರದೀಪ್ ಮಾತನಾಡಿ, ನನ್ನ ಅವಧಿಯಲ್ಲಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಜೊತೆಗೆ ರೈತರಿಗೆ ಸಂಘದಿಂದ ಸಿಗುವಂತಹ ಸೌಲಭ್ಯ ಸಮರ್ಪಕವಾಗಿ ನೀಡುತ್ತೇನೆ. ನಾನು ಆಯ್ಕೆಯಾಗಲು ಸಹಕಾರ ನೀಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಹಾಗೂ ಗ್ರಾಮದ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು.ಈ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು. ಸಂಘದ ಮಾಜಿ ನಿರ್ದೇಶಕರಾದ ಡಿ.ಎಂ.ಮಂಚೇಗೌಡ, ಎಂ.ಚಿಕ್ಕಹುಚ್ಚೇಗೌಡ, ಎಂ.ಹೊನ್ನೇಗೌಡ, ಬಿ.ಎಲ್.ಕೃಷ್ಣ, ನಿರ್ದೇಶಕರಾದ ಡಿ.ಎಂ.ರಮೇಶ್, ಮುದ್ದಶೆಟ್ಟಿ, ರಾಮಣ್ಣ, ಮಂಗಳಮ್ಮ, ಶಾಂತಮ್ಮ, ಪ್ರಶಾಂತ್, ಸೇರಿದಂತೆ ಹಲವರಿದ್ದರು.