ನಾನು ಶಾಸಕನಾಗುವಲ್ಲಿ ಎಸ್.ಜಯಣ್ಣ ಕೊಡುಗೆ ಅಪಾರ: ಶಾಸಕ ಎ.ಆರ್. ಕೃಷ್ಣಮೂರ್ತಿ

KannadaprabhaNewsNetwork | Published : Sep 10, 2024 1:33 AM

ಸಾರಾಂಶ

ಜಯಣ್ಣ ಅವರು ನನಗೆ ಸಹಕಾರ ನೀಡಿದ್ದರೆ ಅಂದೆ ನಾನು ಶಾಸಕನಾಗಿರುತ್ತಿದ್ದೆ, ಜಯಣ್ಣ ಅವರು ತ್ಯಾಗಮಯಿ, ಸೌಮ್ಯ ಸ್ವಭಾವದವರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಎಸ್.ಜಯಣ್ಣ ಹುಟ್ಟುಹಬ್ಬ, ಸಂಸದ ಸುನೀಲ್ ಬೋಸ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾನು ಶಾಸಕನಾಗಿ ಆಯ್ಕೆಯಾಗುವಲ್ಲಿ ಉಗ್ರಾಣ ನಿಗಮದ ಅದ್ಯಕ್ಷ ಎಸ್.ಜಯಣ್ಣ ಅವರ ಪಾತ್ರವಿದೆ, ಅಂದು (2008ರಲ್ಲಿ) ಜಯಣ್ಣ ಅವರು ನನಗೆ ಸಹಕಾರ ನೀಡಿದ್ದರೆ ಅಂದೆ ನಾನು ಶಾಸಕನಾಗಿರುತ್ತಿದ್ದೆ, ಜಯಣ್ಣ ಅವರು ತ್ಯಾಗಮಯಿ, ಸೌಮ್ಯ ಸ್ವಭಾವದವರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಹುಟ್ಟುಹಬ್ಬ, ಸಂಸದ ಸುನೀಲ್ ಬೋಸ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1994ರಿಂದಲೂ ನನಗೂ, ಜಯಣ್ಣ ಅವರಿಗೂ ಉತ್ತಮ ಬಾಂಧವ್ಯವಿತ್ತು. ಅವರು ಸೌಮ್ಯ ಸ್ವಭಾಭಿಗಳು, ಇಂದು ಸಹ ಅವರ 74ನೇ ಜನ್ಮದಿನಾಚರಣೆ. ಇಂದು ಅವರ ಅಭಿಮಾನಿಗಳು ಗೌರವಪೂರ್ವಕವಾಗಿ ಕಾರ್ಯಕ್ರಮದ ಮೂಲಕ ಅಭಿನಂದಿಸುತ್ತಿದ್ದಾರೆ, ಇದು ಜಯಣ್ಣ ಅವರ ನೆನಪಿನಲ್ಲಿ ಉಳಿಯುವಂತಹ ಸ್ಮರಣೀಯ ಕಾರ್ಯಕ್ರಮವಾಗಲಿದೆ ಎಂದರು. ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ಜಯಣ್ಣ ಅವರು ಜಿಲ್ಲೆಯ ಆಸ್ತಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಚಾಮರಾಜನಗರ ಜಿಲ್ಲೆಯನ್ನ ಕಡೆಗಣಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಚಾ.ನಗರ ಜಿಲ್ಲೆಯನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಜಯಣ್ಣ ಅವರು ಲಕ್ಷಾಂತರ ಮಂದಿ ಕಾರ್ಯಕರ್ತರ ಆಸ್ತಿ, ರಾಜಕೀಯದಲ್ಲಿ ಅಧಿಕಾರ ಮುಖ್ಯವಲ್ಲ, ಅಧಿಕಾರದಲ್ಲಿರದಿದ್ದರೂ ಜಯಣ್ಣ ಅವರ ಅಪಾರ ಜನಸಮೂಹವನ್ನು ಹೊಂದಿದ್ದಾರೆ, ಅವರಲ್ಲೊಬ್ಬ ತಾಳ್ಮೆಯ ಸಾಕಾರಮೂರ್ತಿ ಅಡಗಿದ್ದಾನೆ. ಅವರು ನಮ್ಮೆಲ್ಲರ ಆಸ್ತಿ. ಜಯಣ್ಣ ಅವರು ಶಾಸಕ ಕೃಷ್ಣಮೂರ್ತಿಯವರೊಟ್ಟಿಗೆ ಕೂಡಿ ಕೊಳ್ಳೇಗಾಲ ಕ್ಷೇತ್ರ ಮಾತ್ರವಲ್ಲ ಜಿಲ್ಲಾಭಿವೃದ್ಧಿಗೆ ಮುಂದಾಗಬೇಕು, ಅವರ ಮೇಲಿನ ಪ್ರೀತಿಯಿಂದಲೆ ಇಂದು ಜನ ಸೇರಿದ್ದಾರೆ ಎಂದರು.ಧ್ರುವನಾರಾಯಣ್ ಅವರಂತೆ ಸಂಸದರು ಕೆಲಸ ಮಾಡಲಿ: ಸಂಸದರೂ, ಮಾದರಿ ರಾಜಕಾರಣಿಯಾದ ಆರ್.ಧ್ರುವನಾರಾಯಣ್ ಅವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದರು, ಕಾರ್ಯಕರ್ತರು, ಜನರ ನಡುವೆ ಬೆರೆಯುತ್ತಿದ್ದರು. ಅವರಂತೆ ನೂತನ ಸಂಸದ ಸುನೀಲ್ ಬೋಸ್ ಅವರು ಕೆಲಸ ಮಾಡಬೇಕು, ಕಾರ್ಯಕರ್ತರು, ಸಂಸದರ ನಡುವೆ ಮಾನವೀಯ ಸಂಬಂಧವಿರಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂಸದರು ಜಿಲ್ಲಾಭಿವೃದ್ಧಿಗೆ ಶ್ರಮಿಸುವ ಜೊತೆಗೆ ಕಾರ್ಯಕರ್ತರನ್ನು ಗೌರವಿಸುವಂತಾಗಬೇಕು ಎಂದರು.

ಈ ವೇಳೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಆರ್. ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಮಾಜಿ ಜಿಪಂ ಸದಸ್ಯರು ಯೋಗೇಶ್, ಸದಾಶಿವಮೂರ್ತಿ, ಕೊಪ್ಪಾಳಿ ಮಹದೇವನಾಯಕ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಕಾಂಗ್ರೆಸ್ ಪಕ್ಷದ ಬ್ಲಾಕ್ ಮಹಿಳಾ ಅಧ್ಯಕ್ಷೆ ದೇವಿಕಾ, ನಗರಸಭೆ ಮಾಜಿ ಅದ್ಯಕ್ಷ ರಮೇಶ್, ಬಸ್ತಿಪುರ ಶಾಂತು, ಸದಸ್ಯರಾದ ಮಂಜುನಾಥ್, ಸುಮ ಸುಬ್ಬಣ್ಣ, ಮನೋಹರ್, ಮಾಜಿ ಸದಸ್ಯ ಮುಡಿಗುಂಡ ಶಾಂತು, ಅಕ್ಮಲ್ ಪಾಶಾ ಇನ್ನಿತರರಿದ್ದರು. ಜಯಣ್ಣ ಅವರ ಮಾರ್ಗದರ್ಶನ ಅಗತ್ಯ: ಸುನೀಲ್ ಬೋಸ್ನನ್ನಂತ ಯುವ ನಾಯಕರು, ಮುಖಂಡರಿಗೆಗೆ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಮಾರ್ಗದರ್ಶನ, ಸಹಕಾರ ಅತ್ಯಗತ್ಯ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣರ ಹುಟ್ಟುಹಬ್ಬ, ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಜಯಣ್ಣರ ಹುಟ್ಟುಹಬ್ಬದಲ್ಲಿ ನನ್ನನ್ನೂ ಪಕ್ಷದ ಕಾರ್ಯಕರ್ತರು, ಅವರ ಅಭಿಮಾನಿಗಳು ಮನೆ ಮಗನಂತೆ ಸ್ವಾಗತಿಸಿ, ಗೌರವ ಸಲ್ಲಿಸಿದ್ದು ಸಂತಸ ತಂದಿದೆ. ಶಾಸಕ ಕೃಷ್ಣಮೂರ್ತಿ ಅವರಿಗೆ ಪಕ್ಷ ಟಿಕೆಟ್ ನೀಡಿದ ವೇಳೆ ಅವರ ಗೆಲುವಿಗೆ ಶ್ರಮಿಸಿದ್ದು ಅವರ ದೊಡ್ಡಗುಣ, ಅವರ ಮಾರ್ಗದರ್ಶನ ನನ್ನಂತಹ ಯುವಕರಿಗೆ ಅತ್ಯಗತ್ಯವಾಗಿ ಬೇಕು. ಕಾರ್ಯಕರ್ತರ ಪ್ರೀತಿಗೆ ಆಭಾರಿಯಾಗಿದ್ದೆನೆ, ಜಯಣ್ಣ ಅವರಿಗೆ ಇನ್ನೂ ಉನ್ನತ ಸ್ಥಾನ, ಮಾನ ದೊರಕುವಂತಾಗಲಿ ಎಂದರು. ಅಧಿಕಾರವಿಲ್ಲದಿದ್ದರೂ ಸಹಾ ಜನಬಲ ಹೊಂದಿರುವ ವ್ಯಕ್ತಿತ್ವವುಳ್ಳವರು ಎಸ್ ಜಯಣ್ಣ. ಅವರೊಳಗೊಬ್ಬ ತಾಳ್ಮೆಯ ಸಾಕಾರಮೂರ್ತಿ ಅಡಗಿದ್ದಾನೆ. ಜಯಣ್ಣ ಅವರು ತಮಗೆ ರಾಜಕಾರಣದಲ್ಲಿ ಸಹಾಯ ಮಾಡಿದವರನ್ನು ಇನ್ನು ಮರೆತಿಲ್ಲ, ಅವರ ಸೇವೆ ಚಾ.ನಗರ ಜಿಲ್ಲೆಗೆ ಅತ್ಯಗತ್ಯ, ಅವರಲ್ಲಿ ಅನೇಕ ಅಭಿವೃದ್ಧಿ ಕನಸಗುಳಿವೆ. - ಆರ್‌. ನರೇಂದ್ರ, ಹನೂರು ಮಾಜಿ ಶಾಸಕ

Share this article