ಗದಗ: ಬಡತನ, ಕಷ್ಟ, ಜಾತಿಯತೆ ಎಲ್ಲ ವಿಚಾರಗಳಲ್ಲೂ ಬಾಲ್ಯದಿಂದಲೂ ಒಂದಿಲ್ಲೊಂದು ರೀತಿಯ ಹಿಂಸೆಗಳನ್ನು ಅನುಭವಿಸುತ್ತಲೇ ಗಟ್ಟಿಗೊಂಡ ವ್ಯಕ್ತಿತ್ವ ಎಸ್.ಎಲ್. ಭೈರಪ್ಪ ಅವರದ್ದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲ ತಿಳಿಸಿದರು.
ನಗರದಲ್ಲಿ ಆದರ್ಶ ಶಿಕ್ಷಣ ಸಮಿತಿ ಹಾಗೂ ದೇವದತ್ತ ಶಂಕರರಾವ್ ಕುರ್ತಕೋಟಿ ಮೆಮೋರಿಯಲ್ ಪಪೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ದಿ. ಕೆ.ಎಸ್.ಎನ್. ಅಯ್ಯಂಗಾರ್ ಅವರ ಸ್ಮರಣಾರ್ಥ ಪರ್ವಗಳ ಆವರಣ ನಿರ್ಮಿಸಿದ ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ ಕುರಿತು ನಡೆದ ತೃತೀಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಲ್ಯದಿಂದಲೂ ಕಷ್ಟದ ದಿನಗಳನ್ನು ನೋಡುತ್ತಾ ಬಂದಿರುವವರು. ಸಮಾಜದಿಂದ ಹಾಗೂ ಸರ್ಕಾರದಿಂದ ಪ್ರಾಥಮಿಕ ಸೌಲಭ್ಯಗಳು ದೊರೆಯದ ಒಬ್ಬ ವ್ಯಕ್ತಿ ಸ್ವಂತ ಪ್ರತಿಭೆ ಹಾಗೂ ಆಂತರಿಕ ಚೇತನಗಳಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಲು ಸಾಧ್ಯ ಎಂಬುದಕ್ಕೆ ಸಾಕ್ಷಿ ಎಸ್.ಎಲ್. ಭೈರಪ್ಪ ಎಂದರು.
ಭೈರಪ್ಪನವರು ಕೇವಲ ಕಾದಂಬರಿಕಾರರಾಗಿ ಉಳಿದಿಲ್ಲ. ತಮ್ಮ ಕೃತಿಗಳ ಮೂಲಕ ಮಾನವನ ಅಂತರಂಗವನ್ನು ಪ್ರಶ್ನಿಸಿ, ವೈಚಾರಿಕತೆಯ ದೀಪ ಬೆಳಗಿಸಿದವರು. ಅಕ್ಷರ ತಪಸ್ವಿಯಾಗಿ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರು ಬರೆದ ಎಲ್ಲ ಕಾದಂಬರಿಗಳೂ ಕೂಡ ಒಂದೊಂದು ಮೌಲ್ಯದ ಪ್ರಶ್ನೆಗೆ ಉತ್ತರ ಹುಡುಕುವ ಉದ್ದೇಶದಿಂದ ರಚಿನೆಯಾಗಿವೆ. ನಲವತ್ತು ಭಾಷೆಗಳಿಗೆ ಇವರ ಸಾಹಿತ್ಯ ಭಾಷಾಂತರಗೊಂಡು ಅಧ್ಯಯನಕ್ಕೆ ಮುಂದಾಗಿರುವುದು ಕನ್ನಡ ಭಾಷೆಗೆ ಸಂದ ಗೌರವ ಎಂದರು.ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷ ಕೆ.ವಿ. ಕುಷ್ಟಗಿ, ಕಾರ್ಯದರ್ಶಿ ಆನಂದ ಗೋಡಖಿಂಡಿ ಅವರು ಮಾತನಾಡಿದರು. ಈ ವೇಳೆ ಧಾರವಾಡದ ಕೆಇ ಬೋರ್ಡ್ ಪದವಿ ಕಾಲೇಜಿನ ಪ್ರಾ. ಮೋಹನ್ ಸಿದ್ಧಾಂತಿ, ಕೆ. ಗಿರಿರಾಜ ಕುಮಾರ್, ಲಿಂಗರಾಜ ರೇಷ್ಮಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಪ್ರಾ. ಆರ್.ಆರ್. ಕುಲಕರ್ಣಿ ಪರಿಚಯಿಸಿದರು. ಬಸವರಾಜ ಟಿ.ಪಿ. ಸ್ವಾಗತಿಸಿದರು. ರವಿ ಡಿ. ನಾಯ್ಕ ವಂದಿಸಿದರು.