ಕನ್ನಡಪ್ರಭ ವಾರ್ತೆ ಮಂಗಳೂರು
ಕನ್ನಡ ಸಾರಸ್ವತ ಲೋಕದ ಏಕಮೇವಾದ್ವಿತೀಯ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಬದುಕು ಮತ್ತು ಬರಹ ಇವೆರಡೂ ಸಾಹಿತ್ಯ ಲೋಕಕ್ಕೆ ದಾರಿದೀಪದಂತಿತ್ತು ಎಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ನುಡಿದರು.ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವ ಹಾಗೂ ಕೆನರಾ ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಸಾಹಿತ್ಯಾಸಕ್ತರ ಒಗ್ಗೂಡುವಿಕೆಯಲ್ಲಿ ನಗರದ ಡೊಂಗರಕೇರಿ ಕೆನರಾ ವಿದ್ಯಾಸಂಸ್ಥೆಯ ಭುವನೇಂದ್ರ ಸಭಾಭವನದಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ನುಡಿನಮನ ಸಲ್ಲಿಸಿ, ರಾಷ್ಟ್ರೀಯ ಚಿಂತನೆಯುಳ್ಳ ಸಾಹಿತಿಯಾಗಿದ್ದ ಭೈರಪ್ಪ ಸಾಹಿತ್ಯ ಲೋಕದ ಧ್ರುವ ತಾರೆ ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಶ್ರದ್ಧಾಂಜಲಿ ಸಲ್ಲಿಸಿ, ಎಂದಿನವರೆಗೆ ಭೈರಪ್ಪ ಅವರ ಕೃತಿಗಳು ಇರುತ್ತವೆಯೋ ಅಲ್ಲಿಯವರೆಗೂ ಅವರು ನಮ್ಮೊಂದಿಗೆ ಇರುವರಲ್ಲದೆ, ಅನುವಾದಗೊಂಡಿರುವ ಕೃತಿಗಳು ಇರುವಷ್ಟು ಕಾಲ ಆಯಾ ಭಾಷೆಗಳ ಓದುಗರ ಮನದಲ್ಲಿ ಭೈರಪ್ಪ ಶಾಶ್ವತವಾಗಿ ಉಳಿಯುವರು ಎಂದರು.
ಸಂಸ್ಕೃತ ಭಾರತಿಯ ಡಾ.ವಿಶ್ವಾಸ್ ತನ್ನ ಮತ್ತು ಭೈರಪ್ಪ ನಡುವಿನ 25 ವರ್ಷಗಳ ಒಡನಾಟದ ಅನುಭವಗಳನ್ನು ಹಂಚಿಕೊಂಡರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದು, ಸಾಹಿತಿ ಭೈರಪ್ಪನವರು ದೇಶ ಕಂಡ ಓರ್ವ ಶ್ರೇಷ್ಠ ಹಾಗೂ ಧೀಮಂತ ಸಾಹಿತಿಯಾಗಿದ್ದರು, ಅವರು ಅನೇಕ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ ಎಂದು ಸ್ಮರಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಕ್ಯಾ.ಗಣೇಶ್ ಕಾರ್ಣಿಕ್, ಕೆನರಾ ವಿದ್ಯಾ ಸಂಸ್ಥೆಯ ನರೇಶ್ ಶೆಣೈ, ಎಂ.ಬಿ. ಪುರಾಣಿಕ್, ಅಜಕ್ಕಳ ಗಿರೀಶ್ ಭಟ್, ಪ್ರೊ. ತುಕಾರಾಮ ಪೂಜಾರಿ, ಎಂ.ಸಿ ಭಂಡಾರಿ, ಪೊಳಲಿ ನಿತ್ಯಾನಂದ ಕಾರಂತ, ಗಜಾನನ ಪೈ, ಡಾ.ಕೆ. ದೇವರಾಜ್, ಡಾ.ಮಾಧವ ಎಂ.ಕೆ., ಕುಮಾರನಾಥ ಯು.ಕೆ., ಹನುಮಂತ ಕಾಮತ್, ಭ್ರಾಮರಿ ಶಿವಪ್ರಕಾಶ್, ಲಿಟ್ ಫೆಸ್ಟ್‌ನ ಸುನಿಲ್ ಕುಲಕರ್ಣಿ, ಕೋಟೆಕಾರು ಕಲಾ ಗಂಗೋತ್ರಿಯ ಸದಾಶಿವ ಮಾಸ್ಟರ್ ಮತ್ತಿತರರು ಇದ್ದರು. ಅಗಲಿದ ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.ಉಜ್ವಲ್ ಮಲ್ಯ ಮತ್ತು ದಯಾನಂದ ಕಟೀಲ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾಗೇಂದ್ರ ಶೆಣೈ ನಿರೂಪಿಸಿದರು. ಡಾ.ಪ್ರತಿಭಾ ರೈ, ರಚನಾ ಕಾಮತ್ ಬಳಗ ಗಾನ ನಮನ ಸಲ್ಲಿಸಿದರು, ವೇ.ಮೂ. ಡಾ. ಪ್ರಭಾಕರ ಅಡಿಗ ವೇದ ನಮನ ಸಲ್ಲಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ವಂದಿಸಿದರು. ಸಾಹಿತ್ಯ ಕೇಂದ್ರದ ರತ್ನಾಕರ ಕುಳಾಯಿ ಅವರು ಎಸ್.ಎಲ್ ಭೈರಪ್ಪ ಅವರ ಎಲ್ಲ ಕೃತಿಗಳ ಪ್ರದರ್ಶನ ವ್ಯವಸ್ಥೆ ಮಾಡಿದ್ದರು.