ಕಾರವಾರ: ದೇಶದ ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಪರಿಸರವನ್ನು ರಕ್ಷಿಸುವ ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ಯಾಗ ಸ್ಮರಣೀಯವಾದುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಹೇಳಿದರು.ಶುಕ್ರವಾರ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಅರಣ್ಯಗಳು ಕೇವಲ ಮರಗಳ ಸಮೂಹವಲ್ಲ, ಇದು ನಮ್ಮ ಪರಿಸರ ವ್ಯವಸ್ಥೆಯ ಜೀವನಾಡಿ. ಇವು ಮಳೆ, ನದಿಗಳು, ಅಂತರ್ಜಲ, ಮಣ್ಣಿನ ಫಲವತ್ತತೆ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಾನವನ ಆರೋಗ್ಯವನ್ನು ಕಾಪಾಡುವ ಪರಿಸರ ವ್ಯವಸ್ಥೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಪರಿಸರ ಸಂರಕ್ಷಣೆ ಅರಣ್ಯ ಇಲಾಖೆಯ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಹೊಣೆ. ನಮ್ಮ ಸಂವಿಧಾನವು ಪರಿಸರ ರಕ್ಷಣೆಗೆ ವಿಶೇಷ ಮಹತ್ವವನ್ನು ನೀಡಿದೆ.
ಅಧ್ಯಕ್ಷತೆ ವಹಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ, ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ನಾಯಕ ಹುತಾತ್ಮರಾದ 65 ಜನರ ಹೆಸರುಗಳನ್ನು ವಾಚಿಸಿದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ದಿಲೀಷ್ ಶಶಿ, ಐಡಿಎಎಸ್‌ನ(ನೌಕಾನೆಲೆ) ರಜತ ಕುಮಾರ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ, ಸಿಆರ್‌ಝೆಡ್‌ನ ಪ್ರಾದೇಶಿಕ ನಿರ್ದೇಶಕ ಪ್ರವೀಣ್ ಬಸ್ರೂರು, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಪುಲ್ಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಯ ಗೌರವಾರ್ಥ 3 ಸುತ್ತು ಗುಂಡು ಹಾರಿಸಲಾಯಿತು. ಉಪ ವಲಯ ಅರಣ್ಯಾಧಿಕಾರಿ ಗಣಪತಿ ನಿರೂಪಿಸಿ, ವಂದಿಸಿದರು.