ಹುತಾತ್ಮರ ತ್ಯಾಗ, ಬಲಿದಾನ ಸ್ಫೂರ್ತಿಯ ಸೆಲೆ: ನ್ಯಾಯಾಧೀಶ ಎಸ್.ಜೆ.ಕೃಷ್ಣ

KannadaprabhaNewsNetwork | Published : Oct 22, 2024 12:21 AM

ಸಾರಾಂಶ

ಸಮಾಜದ ಶಾಂತಿ ಸುವ್ಯಸ್ಥೆಗಾಗಿ ದಿನದ ೨೪ ಗಂಟೆಯು ಕರ್ತವ್ಯ ನಿರ್ವಹಿಸಿ ತ್ಯಾಗ ಬಲಿದಾನ ಮಾಡಿದ ಹುತಾತ್ಮರು ದೇಶ ಸೇವೆ ಮಾಡುವವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಜೆ. ಕೃಷ್ಣ ಹೇಳಿದರು, ಚಾಮರಾಜನಗರದಲ್ಲಿ ಪೊಲೀಸ್‌ ಹುತಾತ್ಮರ ದಿನದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದ ಶಾಂತಿ ಸುವ್ಯಸ್ಥೆಗಾಗಿ ದಿನದ ೨೪ ಗಂಟೆಯು ಕರ್ತವ್ಯ ನಿರ್ವಹಿಸಿ ತ್ಯಾಗ ಬಲಿದಾನ ಮಾಡಿದ ಹುತಾತ್ಮರು ದೇಶ ಸೇವೆ ಮಾಡುವವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಜೆ. ಕೃಷ್ಣ ಹೇಳಿದರು,ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿ ನಂತರ ಅವರು ಮಾತನಾಡಿದರು.ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವ ವಂದನೆ ಸೂಚಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕರ್ತವ್ಯದಲ್ಲಿರುವಾಗ ತಮ್ಮ ಖಾಸಗಿ ಬದುಕಿನ ಕಡೆ ಹೆಚ್ಚು ಗಮನಹರಿಸದೇ ಸಮಾಜದ ಶಾಂತಿ ಸುವ್ಯವಸ್ಥೆಗೆ ಹೆಚ್ಚು ಗಮನ ನೀಡುವ ಅವರ ಕರ್ತವ್ಯ ಅಭಿನಂದನಾರ್ಹ. ಈಗ ಕರ್ತವ್ಯ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಸ್ಫೂರ್ತಿಯಾಗಿದೆ ಎಂದರು. ಇದು ಮಿಶ್ರ ಭಾವನೆಗಳ ಸಮಾರಂಭ, ಕೃತಜ್ಞತೆ, ಸ್ಪಂದನೆ, ಸ್ಫೂರ್ತಿ, ಸಂಕಲ್ಪ ಇಲ್ಲಿ ಮಿಲನಗೊಂಡಿದೆ, ನಮ್ಮ ಜೀವ ಸುರಕ್ಷಿತಗಾಗಿ ಮಡಿದ ದಿವ್ಯ ಚೇತನಗಳಿಗೆ ಕೃತಜ್ಞತೆ ಸಲ್ಲಿಸುವ ಪುಣ್ಯದ ದಿನ ಇದು, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವ ದಿನ ಎಂದರು.

ಕರ್ತವ್ಯ ಬದ್ಧತೆಯಿಂದ ಸೇವೆ ಸಲ್ಲಿಸಿ ಮಡಿದವರಿಗೆ ಕೃತಜ್ಷತೆ ಸಲ್ಲಿಸಿ, ನಾಗರಿಕರು, ಸಿಬ್ಬಂದಿ ರಾಷ್ಟ್ರಸೇವೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಾಗಿ ಸಂಕಲ್ಪ ಗೈಯುವ ಪುಣ್ಯದ ದಿನ ಇದು ಎಂದರು. ಹಲವು ಸವಾಲುಗಳು ಎದುರಾದಾಗ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ನಾವು ಎಷ್ಟು ಗೌರವ ಸಲ್ಲಿಸಿದರೂ ಸಾಲದು. ವೀರ ಮರಣ ಹೊಂದಿದ ಪೊಲೀಸರಿಗೆ ಗೌರವ ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ವಂದನೆ ಸ್ವೀಕರಿಸಿದರು. ಎಸ್ಪಿ ಡಾ.ಬಿ.ಟಿ.ಕವಿತಾ ಹುತಾತ್ಮರ ನಾಮವಾಚನ ಮಾಡಿ, ಪ್ರತಿ ವರ್ಷ ಸೇವೆಯಲ್ಲಿದ್ದಾಗ ಮರಣ ಹೊಂದಿದ ಪೊಲೀಸರ ಕಾರ್ಯದ ನೆನಪಿಗಾಗಿ ದೇಶವ್ಯಾಪಿ ಪ್ರತಿ ವರ್ಷ ಅ. ೨೧ ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದರು. ಜಿಪಂ ಸಿಇಒ ಮೋನಾ ರೋತ್, ಟಿ.ಹೀರಾಲಾಲ್, ಡಿವೈಎಸ್ಪಿ ಕೃಷ್ಣಯ್ಯ, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಲಾಯಿತು.

Share this article