ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ವಿಫಲರಾಗಿರುವ ಸಚಿವ ಎಂ.ಬಿ. ಪಾಟೀಲ ಹೋರಾಟ ಹತ್ತಿಕ್ಕಲು ಹೋರಾಟಗಾರರ ಮೇಲೆ ಪೊಲೀಸರನ್ನು ಬಳಿಸಿಕೊಂಡು ದೌರ್ಜನ್ಯ ಎಸಗುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ವಿಜಯಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟಗಾರರ ಮೇಲೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಕುಮ್ಮಕ್ಕಿನಿಂದ ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮುರವರು, ರಾಜ್ಯ ಪಾಲ ಥಾವರಚಂದ ಗೆಲ್ಹೋಟ್, ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಮಾತನಾಡಿ, ನಗರದ ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ 2025ರ ಸೆಪ್ಟೆಂಬರ್ 18 ರಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಉದ್ದೇಶಿಸಿರುವ ಪಿಪಿಪಿ ಮಾದರಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ವಿರೋಧಿಸಿ ಸರ್ಕಾರದಿಂದಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು ಆಗ್ರಹಿಸಿ ಅನಿರ್ಧಿಷ್ಟ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. 2026ರ ಜನವರಿ 1ಕ್ಕೆ ಅನಿರ್ದಿಷ್ಟ ಧರಣಿಯು 106ನೇ ಹಾಗೂ ಅಹೋರಾತ್ರಿ 18ನೇ ದಿನ ಪೂರೈಸಿದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಧರಣಿ ನಡೆಸಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಮನವಿ ಕೊಡುವ ಕಾರ್ಯಕ್ರಮವನ್ನು ಹೋರಾಟಗಾರರು ಹಮ್ಮಿಕೊಂಡಿದ್ದರು. ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ವಿಫಲರಾಗಿರುವ ಸಚಿವ ಎಂ.ಬಿ. ಪಾಟೀಲ ಹೋರಾಟ ಹತ್ತಿಕ್ಕಲು ಹೋರಾಟಗಾರರ ಮೇಲೆ ಪೊಲೀಸರನ್ನು ಬಳಿಸಿಕೊಂಡು ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದರು.

ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸ್ವಾಮೀಜಿಗಳಿಗೆ ಸೇರಿದಂತೆ ಎಲ್ಲ ಹೋರಾಟಗಾರರಿಗೆ ಕ್ಷಮೆಯಾಚಿಸಬೇಕು. ಜೊತೆಗೆ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣ ಹಿಂಪಡೆದು ಜೈಲಿನಲ್ಲಿರುವ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಅನೀಲ ಹೊಸಮನಿ, ಭಗವಾನ ರೆಡ್ಡಿ, ಭೋಗೇಶ ಸೋಲಾಪುರ, ಸಿದ್ರಾಮ ಹಳ್ಳೂರ ಅವರನ್ನು ತಕ್ಷಣಕ್ಕೆ ಗೌರವಯುತವಾಗಿ ಬಿಡುಗಡೆಮಾಡಬೇಕೆಂದು ಆಗ್ರಹಿಸಿದರು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುಂದರ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.