ಕನ್ನಡಪ್ರಭ ವಾರ್ತೆ ಕುರುಗೋಡು
ರಥೋತ್ಸವ ಪ್ರಾರಂಭದಲ್ಲಿ ಶ್ರೀ ಸದ್ಗುರುಚಿದಾನಂದ ಮಹಾಸ್ವಾಮಿ ಅವಧೂತರ ೩೩ನೇ ಪುಣ್ಯರಾಧನೆ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ನಸುಕಿನ ಜಾವದಲ್ಲಿ ವಿಶೇಷ ರುದ್ರಾಭಿಷೇಕ, ಬಿಲ್ವರ್ಚನೆ, ಹೋಮ, ಹವನ ಸೇರಿದಂತೆ ಇತರೆ ಧಾರ್ಮಿಕ ಕೈಂಕರ್ಯಗಳು ವಿಧಿ ವಿದಾನಗಳಿಂದ ಸಾಂಗೋಪಸಾಂಗವಾಗಿ ಜರುಗಿದವು. ಸುತ್ತಮುತ್ತಲಿನ ಭಕ್ತರಿಂದ ಶ್ರೀಗಳಿಗೆ ಅರಿಕೆ ಸಲ್ಲಿಸಲಾಯಿತು.
ಭಕ್ತರು ಸಾಲು-ಸಾಲಾಗಿ ಶ್ರೀ ಸದ್ಗುರುಚಿದಾನಂದ ಮಹಾಸ್ವಾಮಿ ಅವಧೂತರ ಕರ್ತೃ ಗದ್ದುಗೆಗೆ ಸಾಲಿನಲ್ಲಿ ನಿಂತು ದರ್ಶನ ಪಡೆದರು.ಶ್ರೀ ಸದ್ಗುರುಚಿದಾನಂದ ಮಹಾಸ್ವಾಮಿ ಅವಧೂತ ಮಠದ ಮಠಾಧೀಶರಾದ ಶ್ರೀ ಷಡಕ್ಷರಿ ಅವಧೂತ ಸ್ವಾಮಿಗಳು ರಥೋತ್ಸವಕ್ಕೆ ಸಂಜೆ ಚಾಲನೆ ನೀಡಿದರು.
ತೇರಿಗೆ ಭಕ್ತರು ಹೂ-ಹಣ್ಣು ಎಸೆದು ಭಕ್ತಿ ಸಮರ್ಪಿಸಿ ಅರಕೆ ತೀರಿಸಿದರು. ನೆರೆದಿದ್ದ ಜನಸ್ತೋಮದ ನಡುವೆ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.
ಎಮ್ಮಿಗನೂರು, ಕಲ್ಲುಕಂಬ, ಓರ್ವಾಯಿ, ಗುತ್ತಿಗನೂರು, ಕೆರೆಕೆರೆ, ಮುಷ್ಟಗಟ್ಟೆ, ಚಿಟಗಿನಹಾಳು, ಹಾವಿನಹಾಳು, ಎಚ್.ವೀರಾಪುರ, ಕುರುಗೋಡು, ಕ್ಯಾದಿಗೆಹಾಳು, ಬಾದನಹಟ್ಟಿ, ಬೈಲೂರು, ಸಿಂದಿಗೇರಿ, ಕೋಳೂರು, ಕಂಪ್ಲಿ, ಬಳ್ಳಾರಿ, ಹಲಕುರ್ಕಿ, ಹಿರೇ ಮುಚ್ಚಳಗುಡ್ಡ, ಕೊಂಕನಕೊಪ್ಪ, ಹಂಸನೂರು, ಗಬ್ಬೇರಕೊಪ್ಪ, ಕಬ್ಬಲಗೇರಿ, ಹುಲ್ಲಿಕೇರಿ, ಆಡಗಲ್, ಬೂದಿಹಾಳ್ ಸೇರಿದಂತೆ ಇತರೆ ಗ್ರಾಮಗಳಿಂದ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.