ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಸುರಕ್ಷತೆ ಹಾಗೂ ಕಾಳಜಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ಪೂನಾ ಬೆಂಗಳೂರು ಹೆದ್ದಾರಿಯ ನೂಲ್ವಿ-ಬೆಳಗಲಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ₹12.5 ಕೋಟಿ ವೆಚ್ಚದಲ್ಲಿ ರಸ್ತೆಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ನೂಲ್ವಿ ಕ್ರಾಸ್ ಬಳಿ ಕಳೆದ ಐದಾರು ವರ್ಷಗಳಲ್ಲಿಯೇ ನೂರಾರು ಸಾವು-ನೋವು ಸಂಭವಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿರುವುದು ಹೆಮ್ಮೆಯ ಸಂಗತಿ. ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಖಾಸಗಿ ವಾಹನಗಳು ಸರಾಗವಾಗಿ ಸಂಚರಿಸುವಂತಾಗಲು ಐದೂವರೆ ಮೀಟರ್ ವಿಶಾಲವಾದ ಕೆಳ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶೇ. 60ರಷ್ಟು ಹೆದ್ದಾರಿ ನಿರ್ಮಾಣ:
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರದ ಅವಧಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಹೊಸ ಅರ್ಥ ಬಂದಿದೆ. 60 ವರ್ಷದ ಯುಪಿಎ ಆಡಳಿತದಲ್ಲಿ ಕೇವಲ ಶೇ. 40ರಷ್ಟು ಮಾತ್ರ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ. ಆದರೆ, ಎನ್‌ಡಿಎ ಅವಧಿಯಲ್ಲಿ ಶೇ. 60ರಷ್ಟು ಹೆದ್ದಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಅವಧಿಯಲ್ಲಿ ಪ್ರತಿದಿನ ಕನಿಷ್ಠ 30 ಕಿಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಆ ಮೂಲಕ ಇಲ್ಲಿಯ ವರೆಗೆ 63 ಸಾವಿರ ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ದಾಖಲೆ ಬರೆಯಲಾಗಿದೆ ಎಂದು ಜೋಶಿ ಹೇಳಿದರು.ಮೃತ್ಯುಕೂಪಕ್ಕೆ ಮುಕ್ತಿ:
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ನೂರಾರು ಜನರನ್ನು ಬಲಿ ಪಡೆದುಕೊಳ್ಳುವ ಮೂಲಕ ಮೃತ್ಯುಕೂಪವಾಗಿದ್ದ ನೂಲ್ವಿ-ಬೆಳಗಲಿ ಕ್ರಾಸ್‌ಗೆ ಮುಕ್ತಿ ನೀಡುವ ಕೆಲಸವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡಿರುವುದು ಹೆಮ್ಮೆಯ ಸಂಗತಿ. ಇದರಿಂದ ನಮ್ಮ ಕ್ಷೇತ್ರದ ಗ್ರಾಮಸ್ಥರ ಬಹುದಿನಗಳ ಕನಸು ಈಡೇರಿದಂತಾಗಿದೆ ಎಂದರು.ಇದೇ ವೇಳೆ ಕೇಂದ್ರ ಸಚಿವ ಜೋಶಿ ಹಾಗೂ ಶಾಸಕ ಪಾಟೀಲ ಅವರನ್ನು ವರೂರು, ಬೆಳಗಲಿ, ನೂಲ್ವಿ ಗ್ರಾಮಸ್ಥರು ಸನ್ಮಾನಿಸಿದರು. ನೂಲ್ವಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಮೊಕಾಶಿ, ಮುಖಂಡರಾದ ಈರಣ್ಣ ಜಡಿ, ನಿಂಗನಗೌಡ ಮರಿಗೌಡರ, ಟಿ.ಜಿ. ಬಾಳಣ್ಣವರ, ದಾನಪ್ಪ ಗಂಗಾಯಿ, ಗೌರಮ್ಮ ಹರಿಜನ, ಬಿ.ವೈ. ಲಕ್ಕನಗೌಡರ, ವರೂರು, ಬೆಳಗಲಿ ಗ್ರಾಪಂ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಂಡಿದ್ದರು.