ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ.೧೭ರಂದು ಸಾಗರ ಬಂದ್

KannadaprabhaNewsNetwork |  
Published : Dec 14, 2025, 02:30 AM IST
ಕಲಾದಗಿ ಗ್ರಾಮದ ದಿ.ಕರ್ನಾಟಕ ಪ್ರೌಢಶಾಲೆಗೆ ಸಾರ್ವಜನಿಕ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಭೇಟಿ ನೀಡಿದರು. | Kannada Prabha

ಸಾರಾಂಶ

ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ. ೧೭ರಂದು ಸಾಗರ ಬಂದ್‌ಗೆ ಕರೆ ನೀಡಲಾಗುತ್ತಿದೆ. ಆ ದಿನ ಸಾರ್ವಜನಿಕರು, ಸಂಘಸಂಸ್ಥೆಯವರು, ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮಿಗಳು ಸ್ವಯಂಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ. ೧೭ರಂದು ಸಾಗರ ಬಂದ್‌ಗೆ ಕರೆ ನೀಡಲಾಗುತ್ತಿದೆ. ಆ ದಿನ ಸಾರ್ವಜನಿಕರು, ಸಂಘಸಂಸ್ಥೆಯವರು, ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮಿಗಳು ಸ್ವಯಂಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಬಂದ್ ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ನಮ್ಮ ಹಕ್ಕೊತ್ತಾಯವನ್ನು ದಾಖಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಸಾಗರ ಜಿಲ್ಲೆ ಮಾಡಿ ಎಂದು ಹತ್ತು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ನಮ್ಮ ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದಾಗ ಶಾಸಕರು ಬಂದರೆ ನಾವು ಅವರ ಜೊತೆ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗುವ ಶಾಸಕರ ಭರವಸೆ ಈಡೇರಿಲ್ಲ. ಶಾಸಕರು ಅನೇಕ ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಆದರೆ ಸಾಗರ ಜಿಲ್ಲೆ ಮಾಡುವ ವಿಷಯ ಪ್ರಸ್ತಾಪಿಸದೆ ಇರುವುದು ಬೇಸರ ತರಿಸಿದೆ ಎಂದರು.

ಅಭಿವೃದ್ಧಿ ದೃಷ್ಟಿಯಲ್ಲಿ ಸಾಗರ ತೀರ ಹಿನ್ನೆಡೆ ಅನುಭವಿಸಿದೆ. ಬಿ.ಎಚ್.ರಸ್ತೆ ಅಗಲೀಕರಣ ಮಂದಗತಿಯಲ್ಲಿ ಸಾಗಿದರೆ ದಶಕಗಳ ಬೇಡಿಕೆ ಮಾರ್ಕೆಟ್ ರಸ್ತೆ ಅಗಲೀಕರಣ ಆಗುತ್ತಿಲ್ಲ. ಯುಜಿಡಿ ಕಾಮಗಾರಿ ನೆನಗುದಿಗೆ ಬಿದ್ದಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಯಾಗಿಲ್ಲ. ಸಾಗರ ಅಭಿವೃದ್ಧಿಗೆ ಕಾಣದ ಕೈಗಳು ಅಡ್ಡಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರ ಜಿಲ್ಲೆಯಾಗುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮಿತಿಯ ಸುಂದರ ಸಿಂಗ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಅನೇಕ ಜಿಲ್ಲೆಗಳನ್ನು ವಿಭಜನೆ ಮಾಡಿ ಪ್ರತ್ಯೇಕ ಜಿಲ್ಲೆ ಮಾಡಲಾಗಿದೆ. ಬೆಳಗಾವಿ, ತುಮಕೂರು, ಉತ್ತರ ಕನ್ನಡ, ಸವದತ್ತಿ ಇನ್ನಿತರೆ ಜಿಲ್ಲೆಗಳನ್ನು ವಿಭಜನೆ ಮಾಡಿ ಪ್ರತ್ಯೇಕ ಜಿಲ್ಲೆ ಮಾಡಿ ಎಂಬ ಹೋರಾಟ ನಡೆಯುತ್ತಿದೆ. ಆದರೆ ಸಾಗರ ಜಿಲ್ಲೆ ಮಾಡಿ ಎಂಬ ಹೋರಾಟಕ್ಕೆ ನಮಗೆ ಜನಪ್ರತಿನಿಧಿಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಗರ ಬಂದ್ ಮೂಲಕ ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಹೋರಾಟ ಸಮಿತಿಯ ಮಂಜುನಾಥ ಆಚಾರ್, ತಾರಾಮೂತಿ, ಕೆ.ವಿ.ಜಯರಾಮ್, ಮಹ್ಮದ್ ಖಾಸಿಂ, ಅಕ್ಬರ್ ಖಾನ್, ವೆಂಕಟೇಶ್, ದೇವು ಆಲಳ್ಳಿ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ