ಸಾಗರ: ಸಾಗರ ಜಿಲ್ಲೆಗೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಸಾಗರ ಬಂದ್ ಅಭೂತಪೂರ್ವ ಜನಬೆಂಬಲದಿಂದಾಗಿ ಸಂಪೂರ್ಣ ಯಶ್ವಿಯಾಯಿತು. ಬೆಳಗಿನಿಂದ ಸಂಜೆ ೬ವರೆಗೆ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿದ್ದವು.
ಗಣಪತಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ಉದ್ದಕ್ಕೂ ಸಾಗರ ಜಿಲ್ಲೆ ಆಗಲೇಬೇಕು ಎನ್ನುವ ಕೂಗು ಮುಗಿಲುಮುಟ್ಟಿತ್ತು. ಸಾಗರ ಹೋಟೆಲ್ ವೃತ್ತದಲ್ಲಿ ಬಹಿರಂಗ ಸಭೆ ನಡೆದು ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಮುಖರು, ರಾಜ್ಯ ಸರ್ಕಾರ ಮಲೆನಾಡಿನ ಜನರ ಸ್ವಾಭಿಮಾನವನ್ನು ಕೆಣಕಬಾರದು. ಮಲೆನಾಡಿನ ಜನರನ್ನು ಹಗುರವಾಗಿ ಪರಿಗಣಿಸಿದರೆ ಮುಂದೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸೌಲಭ್ಯಕ್ಕಾಗಿ ನಾವು ಆಗ್ರಹಿಸಿದಾಗ ಸರ್ಕಾರ ಸ್ಪಂದಿಸದಿದ್ದರೆ ಮುಂದೆ ಸಹಿ ಸಂಗ್ರಹ, ಕಾನೂನು ಭಂಗ, ಜೈಲ್ ಭರೋದಂತಹ ಅಹಿಂಸಾತ್ಮಕ ಹೋರಾಟ ನಡೆಸುತ್ತೇವೆ. ನ್ಯಾಯ ಸಿಗದಿದ್ದರೆ ಹಿಂಸಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದರು.ಸಾಗರಕ್ಕೆ ಜಿಲ್ಲೆಯಾಗುವ ಯೋಗ್ಯತೆ ಹಾಗೂ ಅರ್ಹತೆ ಎರಡು ಇದೆ. ಐತಿಹಾಸಿಕ ಹಿನ್ನೆಲೆಯಿದೆ. ವಿಪುಲವಾದ ಸ್ಥಳಾವಕಾಶವಿದ್ದು ಜಿಲ್ಲೆಯಾಗಿ ಮೇಲ್ದರ್ಜೆಗೇರಿದರೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಅವಕಾಶವಿದೆ. ಹಾಗಾಗಿ ಸಾಗರವನ್ನೇ ಜಿಲ್ಲೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.ಸಾಗರದ ಜನರ ನಾಡಿಮಿಡಿತವನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಹೋರಾಟ ಹಿಂಸಾರೂಪಕ್ಕೆ ತಿರುಗುವುದರೊಳಗಾಗಿ ಎಚ್ಚೆತ್ತುಕೊಳ್ಳಬೇಕು. ಸಾಗರ ಜಿಲ್ಲೆಯಾಗಬೇಕೆನ್ನುವ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಸಣ್ಣ ಸಣ್ಣ ಜಿಲ್ಲೆಯಾದರೆ ವಿಕೇಂದ್ರೀಕರಣದಿಂದ ಆಡಳಿತ ಸುಲಭವಾಗುತ್ತದೆ. ರಾಜ್ಯ ಸರ್ಕಾರ ನಮ್ಮ ಹಕ್ಕೊತ್ತಾಯವನ್ನು ಗಂಭಿರವಾಗಿ ಪರಿಗಣಿಸಿಬೇಕು. ಸಾಗರ ಜಿಲ್ಲೆಯಾದರೆ ಇದುವರೆಗೆ ನಮಗಾಗಿರುವ ಅನ್ಯಾಯಗಳಿಗೆ ನ್ಯಾಯ ಸಿಗುತ್ತದೆ. ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ದೊರಕುತ್ತವೆ ಎಂದು ಹೇಳಿದರು.ಪ್ರಮುಖರಾದ ತೀ.ನಾ.ಶ್ರೀನಿವಾಸ್, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಅಶ್ವಿನಿಕುಮಾರ್, ಎಚ್.ಎನ್.ಉಮೇಶ್, ಎಸ್.ವಿ.ಹಿತಕರ ಜೈನ್, ಮಧುರಾ ಶಿವಾನಂದ, ಮೈತ್ರಿ ಪಾಟಿಲ್, ಗಿರೀಶಗೌಡ, ಕೆ.ಎಸ್.ಪ್ರಶಾಂತ, ಆರ್.ಶ್ರೀನಿವಾಸ್, ಎಂ.ರಾಘವೇಂದ್ರ, ಜ್ಯೋತಿ ಮೊದಲಾದವರು ಮಾತನಾಡಿದರು.
ಮಂಜುನಾಥ್ ಆಚಾರ್, ಸುಂದರ ಸಿಂಗ್, ತಾರಾಮೂರ್ತಿ, ಕೆ.ವಿ.ಜಯರಾಮ್, ಗಣೇಶ್ ಪ್ರಸಾದ್, ಮಹ್ಮದ್ ಖಾಸಿಂ, ವೀರಭದ್ರಪ್ಪ ಜಂಬಿಗೆ, ಅಜೀಂ, ಸದ್ದಾಂ, ಕನ್ನಪ್ಪ ಬೆಳಲಮಕ್ಕಿ, ಭದ್ರೇಶ್, ಕೆ.ಎನ್.ನಾಗೇಂದ್ರ, ನಾಗೇಂದ್ರ ಕುಮಟಾ, ಮನೋಜ್ ಕುಗ್ವೆ, ಸುಧೀಂದ್ರ, ಕೋಮಲ್ ರಾಘವೇಂದ್ರ ಇನ್ನಿತರರು ಹಾಜರಿದ್ದರು.೨೪ ಗಂಟೆ ಗಡುವುಶಾಸಕ ಗೋಪಾಲಕೃಷ್ಣ ಬೇಳೂರು ಬಹಿರಂಗವಾಗಿ ಜಿಲ್ಲಾ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಆ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಸ್ಪಂದಿಸಿಲ್ಲ. ಹಿಂದೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದರು. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ದೊರಕಿದ್ದರೂ ಸಾಗರ ಜಿಲ್ಲೆಯ ಪ್ರಸ್ತಾಪ ಮಾಡಿಲ್ಲ. ಸಾಗರ ಜಿಲ್ಲೆಗಾಗಿ ಒತ್ತಾಯಿಸಿಲ್ಲ. ಸಾಗರ ಜಿಲ್ಲೆಯಾಗಿ ಘೋಷಿಸುವಲ್ಲಿ ಶಾಸಕರ ಜವಾಬ್ದಾರಿ ಹೆಚ್ಚಾಗಿದೆ. ಶಾಸಕರು ಮುಂದಿನ ೨೪ಗಂಟೆಯೊಳಗಾಗಿ ಹೋರಾಟಗಾರರಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಬೇಕು. ಹಕ್ಕೊತ್ತಾಯದ ಮನವಿ ಸಲ್ಲಿಸಲು ಅವಕಾಶ ಕಲ್ಪಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.