ಕನ್ನಡಪ್ರಭ ವಾರ್ತೆ ಬೀದರ್
ಮುಸ್ಲಿಂ ಸಮುದಾಯದ ಮತಗಳಿಂದಲೇ ಕಾಂಗ್ರೆಸ್‌ನ ಸಾಗರ ಖಂಡ್ರೆ ಗೆದ್ದಿದ್ದು, ಅವರ ತಂದೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮುಸ್ಲಿಂಮರ ಕೆಲಸಗಳನ್ನು ತಲೆಬಾಗಿ ಮಾಡಬೇಕಾಗುತ್ತದೆ. ನಾನು ಅದನ್ನು ಮಾಡಿಸಿ ಕೊಡುತ್ತೇನೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಬೀದರ್‌ನಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ಸಚಿವ ಜಮೀರ್ ಅಹ್ಮದ್ ಕೇವಲ ಮುಸ್ಲಿಂ ಮತಗಳೇ ಖಂಡ್ರೆ ಅವರನ್ನು ಗೆಲ್ಲಿಸಿವೆ ಎಂಬ ವಿವಾದಾತ್ಮಕ ಹೇಳಿಕೆ ಹಿಂದೂ ಸಮುದಾಯವನ್ನು, ಕೆರಳಿಸಿದ್ದು, ವಿರೋಧ ಪಕ್ಷ ಬಿಜೆಪಿಗೆ ಆಹಾರವಾಗಿದ್ದಷ್ಟೇ ಅಲ್ಲ ಸ್ವತಃ ಈಶ್ವರ ಖಂಡ್ರೆಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅದಾಲತ್‌ನಲ್ಲಿ ಸರ್ವೆ ನಂಬರ್ 93ರ ಸ್ಮಶಾನ ಭೂಮಿ ಅರಣ್ಯ ಪ್ರದೇಶ ಎಂದು ವಿನಾ ಕಾರಣ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೊಡಿಕೊಂಡಿದ್ದ ವ್ಯಕ್ತಿಗೆ ಅಕ್ಕ ಪಕ್ಕದಲ್ಲಿ ಎಲ್ಲೂ ಜಾಗ ಇಲ್ವಾ ಎಂದು ಪ್ರಶ್ನೆ ಕೇಳಿದ ಜಮೀರ್ ಅಹ್ಮದ್‌ಗೆ ಅಕ್ಕ ಪಕ್ಕದಲ್ಲಿ ಎಲ್ಲೂ ಖಾಲಿ ಜಾಗ ಇಲ್ಲ, ಮೊದಲಿನಿಂದಲೂ ಅಲ್ಲೆ ಅಂತ್ಯಕ್ರಿಯೆ ಮಾಡ್ತೀವಿ ಎಂದ ವ್ಯಕ್ತಿಗೆ ಉತ್ತರಿಸಿದ ಜಮೀರ್, ಅರಣ್ಯ ಸಚಿವ ಖಂಡ್ರೆ ಮುಸ್ಲಿಂಮರ ಮತಗಳಿಂದಲೇ ಗೆದ್ದಿದ್ದು ಅವರ ಕೆಲಸವನ್ನು "ಝಕ್ ಮಾರ್ ಕೆ ಕಾಮ್ ಕರನಾ ಪಡೆಗಾ " ಎಂದು ಹೇಳುವ ಮೂಲಕ ಜಾತಿಯ ಮೂಲಕ ಪಕ್ಷವನ್ನು ಮತ್ತು ಗೆದ್ದ ಅಭ್ಯರ್ಥಿ ಸಾಗರ ಖಂಡ್ರೆ ಅವರನ್ನು ಗುರುತಿಸುವಂತೆ ಮಾಡಿದೆ.ಉಲ್ಟಾ ಹೊಡೆದ ಜಮೀರ್ ಅಹ್ಮದ್: ವಕ್ಫ್ ಅದಾಲತ್‌ನಲ್ಲಿ ಕೇವಲ ಮುಸ್ಲಿಂ ಮತಗಳಿಂದಲೇ ಬೀದರ್ ಸಂಸದ ಸಾಗರ ಖಂಡ್ರೆ ಗೆದ್ದಿದ್ದಾರೆ ಎಂಬ ಹೇಳಿಕೆ ನೀಡಿದ್ದ ಜಮೀರ್ ಅಹ್ಮದ್ ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಮುಸ್ಲಿಂ ಮತಗಳಿಂದ ಸಾಗರ್ ಖಂಡ್ರೆ ಗೆದ್ದಿದ್ದಾರೆ ಎಂದಿದ್ದ ಜಮೀರ್.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರಿಗೆ ಮಾತನಾಡಿ, ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಮುಸ್ಲಿಂಮರು ಒನ್ ಸೈಡ್ ಮತ ಕೊಟ್ಟಿದಾರೆ. ಅದಕ್ಕೆ ಸಾಗರ್ ಖಂಡ್ರೆ ಗೆದ್ದಿದ್ದಾರೆ ಅಂದಿದ್ದೆ. ಇದರ ಬಗ್ಗೆ ಸಮಾಜಕ್ಕೆ ಹೇಳಬೇಕು ತಾನೆ, ಮುಸಲ್ಮಾನರು ಓಟ್ ನೀಡದೇ ಗೆಲ್ಲೋದಕ್ಕೆ ಸಾಧ್ಯನಾ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ ಅವರು, ಸಾಗರ ಖಂಡ್ರೆ 6 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದಾರೆ. ಮುಸ್ಲಿಂಮರು 2 ಲಕ್ಷಕ್ಕೂ ಅಧಿಕ ಮತ ಕೊಟ್ಟಿದ್ದಾರೆ ಇದರಲ್ಲಿ ತಪ್ಪೇನಿದೆ. ಕೇವಲ ಮುಸ್ಲಿಂಮರಿಂದ ಮಾತ್ರ ಗೆದ್ದಿದ್ದಾರೆ ಅಲ್ಲ ಮುಸ್ಲಿಂ ಸಮುದಾಯ ಒಂದೇ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಗೆದ್ದಿದ್ದಾರೆ. ಹೀಗಾಗಿ ಏನ್ ಬೇಕೊ ಕೆಲಸ ಮಾಡಿಕೊಳ್ಳಬಹುದು ಅಂತ ಹೇಳಿದ್ದೇನೆ ಎಂದು ತೇಪೆ ಹಚ್ಚುವ ಮೂಲಕ ಉಲ್ಟಾ ಹೊಡೆದಿದ್ದಾರೆ.ಸಿ.ಟಿ ರವಿಗೆ ಸಚಿವ ಜಮೀರ್ ತಿರುಗೇಟು: ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಜಾತಿ, ಧರ್ಮದ ಬಗ್ಗೆ ಹೇಳಿ ಹೇಳಿನೇ ಸೋತಿರೋದು. ನನ್ನ ಕ್ಷೇತ್ರದಲ್ಲಿ ಮುಸಲ್ಮಾನರಿಗಿಂತ ಹಿಂದೂಗಳೇ ಹೆಚ್ಚು ಮತ ಕೊಟ್ಟಿದ್ದಾರೆ. ಜಮೀರ್ ಹಿಂದೂ ವಿರೋಧಿ ಅಂದಿದ್ದರು, ಆದರೆ ಹಿಂದೂಗಳ ನಮಗೆ ಹೆಚ್ಚು ಮತ ಕೊಟ್ಟಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.