ಕವಿತೆಗೆ ಧ್ವನಿಯ ಶಕ್ತಿ ಇದೆ. ಆ ಮೂಲಕ ಕವಿತೆ ತನ್ನನ್ನು ತಾನು ವಿಶಿಷ್ಟವಾಗಿ ಪರಿಚಯಿಸಿಕೊಳ್ಳುತ್ತದೆ. ಭೂತದ ಸಂಗತಿಗಳು ಭೂತದಂತೆ ನಮ್ಮನ್ನು ಕಾಡಿದಾಗ ಕವಿತೆ ಉದಯಿಸುತ್ತದೆ. ಬರೆಯುವ ಕವಿಗಿಂತ ಅರಿಯುವ ಕವಿ ದೊಡ್ಡವ. ಒಂದು ಕವಿತೆ ತನ್ನ ಅರ್ಥ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಅದು ಶ್ರೀಮಂತವಾಗುತ್ತದೆ. ಸೃಷ್ಟಿ ಕ್ರಿಯೆ ಸದಾ ಸ್ಮೃತಿ ಹಾಗೂ ವಿಸ್ಮೃತಿಗಳ ಮಧ್ಯ ಲಾಲಿಯಾಡುತ್ತಿರುತ್ತದೆ. ಜೀವನದಂತೆ ಕಾವ್ಯವು ಲಯಬದ್ಧವಾದರೆ ಅದು ಸಹೃದಯವನ್ನು ತಲುಪಲು ಸಾಧ್ಯ.
ಕನ್ನಡಪ್ರಭ ವಾರ್ತೆ ಕಾರಟಗಿಕವಿತೆಗೆ ಧ್ವನಿಯ ಶಕ್ತಿ ಇದೆ. ಆ ಮೂಲಕ ಕವಿತೆ ತನ್ನನ್ನು ತಾನು ವಿಶಿಷ್ಟವಾಗಿ ಪರಿಚಯಿಸಿಕೊಳ್ಳುತ್ತದೆ. ಭೂತದ ಸಂಗತಿಗಳು ಭೂತದಂತೆ ನಮ್ಮನ್ನು ಕಾಡಿದಾಗ ಕವಿತೆ ಉದಯಿಸುತ್ತದೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.ಸಮೀಪದ ಮರ್ಲಾನಹಳ್ಳಿಯ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಸಾಪ ತಾಲೂಕು ಘಟಕದಿಂದ ಕನ್ನಡ ಕಾರ್ತಿಕೋತ್ಸವ ಕಾರ್ಯಕ್ರಮದಂಗವಾಗಿ ನಡೆದ ಎರಡು ದಿನಗಳ ಕಾವ್ಯ ಕಮ್ಮಟ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.ಬರೆಯುವ ಕವಿಗಿಂತ ಅರಿಯುವ ಕವಿ ದೊಡ್ಡವ. ಒಂದು ಕವಿತೆ ತನ್ನ ಅರ್ಥ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಅದು ಶ್ರೀಮಂತವಾಗುತ್ತದೆ. ಸೃಷ್ಟಿ ಕ್ರಿಯೆ ಸದಾ ಸ್ಮೃತಿ ಹಾಗೂ ವಿಸ್ಮೃತಿಗಳ ಮಧ್ಯ ಲಾಲಿಯಾಡುತ್ತಿರುತ್ತದೆ. ಜೀವನದಂತೆ ಕಾವ್ಯವು ಲಯಬದ್ಧವಾದರೆ ಅದು ಸಹೃದಯವನ್ನು ತಲುಪಲು ಸಾಧ್ಯವೆಂದರು.ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾನು ಏನೆಲ್ಲ ಬರೆದಿದ್ದರೂ ನನ್ನ ತಾಯಿಯ ಕುರಿತು ಒಂದೇ ಒಂದು ಸಾಲನ್ನೂ ಬರೆಯಲಾಗಿಲ್ಲ. ಕೆಲ ವ್ಯಕ್ತಿಗಳು ಹಾಗೂ ಭಾವನೆಗಳು ಶಬ್ದಕ್ಕೆ ಅತೀತವಾಗಿರುತ್ತವೆ ಎಂಬುದಕ್ಕೆ ನನ್ನ ತಾಯಿಯ ಕುರಿತಾಗಿ ನಾನು ಒಂದಕ್ಷರ ಬರೆಯದಿರುವುದೇ ಸಾಕ್ಷಿ. ಕವಿಗೆ ಪದ ಜಿಪುಣವಿದ್ದರಷ್ಟೇ ಅವನ ಕಾವ್ಯ ಸೃಷ್ಟಿ ಹೆಚ್ಚು ಶ್ರೀಮಂತವಾಗುತ್ತದೆ. ಪ್ರಸ್ತುತ ಕನ್ನಡದ ಉಳಿವು ಮತ್ತು ಬೆಳವಣಿಗೆ ಕುರಿತು ಮಾತನಾಡುವ ಸಂದರ್ಭದಲ್ಲಿ ಅನಿವಾರ್ಯವಲ್ಲದ ಹೊರತು ಕಾವ್ಯದಲ್ಲಿ ಆಂಗ್ಲ ಪದಗಳ ಬಳಕೆ ಕಡಿಮೆ ಮಾಡುವುದೊಳಿತು ಎಂದರು.ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಹಾಗೂ ಧಾರವಾಡದ ಕೆಸಿಡಿ ಕಾಲೇಜು ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಹಾಗೂ ಪ್ರೊ. ಸಿದ್ದು ಯಾಪಲಪರವಿ ಮಾತನಾಡಿದರು.ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ಮಾತನಾಡಿದರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಗುಂಡಪ್ಪ ವಿಭೂತಿ ಅವರನ್ನು ಪರಿಷತ್‌ನಿಂದ ಸನ್ಮಾನಿಸಲಾಯಿತು.ಸಾನಿಧ್ಯವನ್ನು ಮರುಳಸಿದ್ದಯ್ಯಸ್ವಾಮಿ ಹಿರೇಮಠ ವಹಿಸಿದ್ದರು. ಹಿರಿಯ ಸಾಹಿತಿ ಪವನಕುಮಾರ ಗುಂಡೂರು, ರಮೇಶ್ ಕುಲಕರ್ಣೀ, ಎಂ.ನರಸಿಂಹರಾವ್, ಕಸಾಪದ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ, ಸತ್ಯನಾರಾಯಣ, ಸೋಮನಾಥ ದೊಡ್ಡಮನೆ, ಕಸಾಪ ಮಾಜಿ ಅಧ್ಯಕ್ಷ ಬಸವರಾಜ್ ರ್‍ಯಾವಳದ, ನಿಕಟಪೂರ್ವ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಭೀಮಣ್ಣ ಕರಡಿ, ಕಮ್ಮಟದ ಸಂಚಾಲಕರಾದ ರಮೇಶ್ ಬನ್ನಿಕೊಪ್ಪ ಮತ್ತು ಚನ್ನಬಸಪ್ಪ ಆಸ್ಪರಿ ಪರಿಷತ್ತಿನ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಯತ್ನಟ್ಟಿ, ರುದ್ರಗೌಡ ಮೈಲಾಪುರ, ತಿಮ್ಮಣ್ಣ ನಾಯಕ್, ಅಲಿ ಹುಸೇನ್ ಉಮೇಶ್ ಮರ್‍ಲಾನಹಳ್ಳಿ ಇದ್ದರು.ಸೋಮು ಕುದುರಿಹಾಳ, ಮಂಜುನಾಥ್ ಚಿಕೇನಕೊಪ್ಪ, ಮೆಹಬೂಬ್ ಕಿಲ್ಲೇದಾರ್ ಕಾರ್ಯಕ್ರಮ ನಿರ್ವಹಿಸಿದರು.ನಂತರ ನಡೆದ ಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಹೇಮಾ ಪಟ್ಟಣಶೆಟ್ಟಿ ಶಿಬಿರಾರ್ಥಿಗಳನ್ನುದ್ದೇಶಿ ಕಾವ್ಯ ಗ್ರಹಿಕೆ, ಕಾವ್ಯ ಕಟ್ಟುವ ಕುರಿತು ಆಯ್ದ ಕವಿಗಳ ಕವನಗಳನ್ನು ಪ್ರಾಯೋಗಿಕ ವಿಮರ್ಶಾ ವಿಧಾನದ ಮೂಲಕ ವಿಶ್ಲೇಷಿಸಿದರು.ಅತ್ಯುತ್ತಮ ಕನ್ನಡ ಕಾವ್ಯ ಪರಂಪರೆ, ಶ್ರೇಷ್ಠ ಕಾವ್ಯದ ವಿವಿಧ ಮಾದರಿಗಳ ಪರಿಚಯ, ಕಾವ್ಯ ಕಟ್ಟುವಿಕೆಯ ತಾಂತ್ರಿಕ ಮತ್ತು ತಾತ್ವಿಕ ವಿವರಗಳ ಕುರಿತಂತೆ ಶಿಬಿರಾರ್ಥಿಗಳೊಂದಿಗೆ ಸುದೀರ್ಘ ಸಂವಾದ ನಡೆಸಿದರು. ಕಮ್ಮಟದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ೧೦೦ಕ್ಕೂ ಹೆಚ್ಚು ಕಾವ್ಯಾಸಕ್ತರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.