ಜೂನ್‌ 29ರಂದು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಘೋಷಣೆ

KannadaprabhaNewsNetwork |  
Published : Jun 22, 2025, 01:18 AM IST
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರು ತಮ್ಮ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿರುವವರಿಗೆ ಎದುರೇಟು ನೀಡಿದರು.  | Kannada Prabha

ಸಾರಾಂಶ

ಜೂ. 29ರಂದು ಸಂಡೂರಿನಲ್ಲಿ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಘೋಷಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಬಳ್ಳಾರಿ: ಜೂ. 29ರಂದು ಸಂಡೂರಿನಲ್ಲಿ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಘೋಷಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಸಮ್ಮೇಳನ ಆಯೋಜಿಸುವುದಾಗಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಂದಿನ ವಾರ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಚರ್ಚೆ ನಡೆಸಲಾಗುತ್ತದೆ. ಆ ಬಳಿಕ ದಿನಾಂಕ, ಸ್ಥಳ ಘೋಷಿಸಲಾಗುತ್ತದೆ. ಆದರೆ, ಸಂಡೂರಿನಲ್ಲಿ ಜರುಗುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು. ಯಾವುದೇ ಕಾರಣಕ್ಕೂ ಬಳ್ಳಾರಿಯಿಂದ ಸಮ್ಮೇಳನ ಸ್ಥಳಾಂತರಗೊಳ್ಳುವುದಿಲ್ಲ. ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಬಳ್ಳಾರಿಯಲ್ಲಿಯೇ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಕಸಾಪ ಆಡಳಿತದ ಕುರಿತು ಆರೋಪಗಳು, ವಾದ–ವಿವಾದಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶ ಜೋಶಿ, ನನ್ನ ವಿರುದ್ಧ ಟೀಕೆ ಮಾಡುತ್ತಿರುವವರಿಗೆ ಆಡಳಿತಾತ್ಮಕ, ಕಾನೂನಾತ್ಮಕ ಜ್ಞಾನವೇ ಇಲ್ಲ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗದು. ನಾನು ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ನಾನು ಚುನಾಯಿತ. ಹೀಗಾಗಿ ಏಕಾಏಕಿ ಆಡಳಿತಾಧಿಕಾರಿಯನ್ನು ತಂದು ಕೂರಿಸಲೂ ಸಾಧ್ಯವಿಲ್ಲ ಎಂದರು.

ಟೀಕೆಯ ನೆಪದಲ್ಲಿ ಕಸಾಪ ಅಧ್ಯಕ್ಷರ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ವಿನಾಕಾರಣ ನನ್ನ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಕಾನೂನು ಮೊರೆ ಹೋಗುವೆ. ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದು ಹೇಳಿದರು.

ಬಳ್ಳಾರಿ ಸಮ್ಮೇಳನಕ್ಕೆ ₹40 ಕೋಟಿ ಕೇಳಿರುವುದನ್ನು ಪ್ರಶ್ನಿಸುತ್ತಿರುವವರು ಮಂಡ್ಯ ಹಾಗೂ ಹಾವೇರಿ ಸಮ್ಮೇಳನದ ವೇಳೆ ಯಾಕೆ ಪ್ರಶ್ನೆ ಮಾಡಲಿಲ್ಲ? ಬಳ್ಳಾರಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಮಾತ್ರ ಇವರ ವಿರೋಧ ಯಾಕೆ? ಸರ್ಕಾರ ಸಮ್ಮೇಳನಕ್ಕೆ ಬಿಡುಗಡೆ ಮಾಡುವ ಹಣ ಅಧ್ಯಕ್ಷರ ಖಾತೆಯಲ್ಲಿ ಇರುವುದಿಲ್ಲ. ಜಿಲ್ಲಾಡಳಿತ ಖಾತೆಗೆ ಹೋಗುತ್ತದೆ. ಈ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದವರು ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವ ತಿಳಿದು ಮಾತನಾಡಬೇಕು. ನನ್ನನ್ನು ಗುರಿಯಾಗಿರಿಸಿಕೊಂಡು ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಸಮ್ಮೇಳನದ ಖರ್ಚು-ವೆಚ್ಚಗಳ ಪರಿಶೀಲನೆ ಮೂರು ಹಂತದಲ್ಲಿ ಆಗುತ್ತದೆ. ಹೀಗಾಗಿ ಲೆಕ್ಕಪತ್ರ ಬಹಿರಂಗ ವಿಳಂಬವಾಗಿದೆ. ಶೀಘ್ರದಲ್ಲಿಯೇ ಅದನ್ನು ಬಹಿರಂಗ ಮಾಡುತ್ತೇವೆ. ಕಸಾಪದಲ್ಲಿ ಆರ್ಥಿಕ ಅಶಿಸ್ತು ಇಲ್ಲ. ಸಂಡೂರಿನಲ್ಲಿ ಜೂ. 29ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಿದ್ದ ಸಚಿವ ಸ್ಥಾನವನ್ನು ಸರ್ಕಾರ ಹಿಂಪಡೆದಿದೆ. ಇದು ನನಗೆ ಮಾಡಿದ ಅವಮಾನ ಅಲ್ಲ; ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅಪಮಾನವಾಗಿದೆ. ಸ್ಥಾನಮಾನ ಹಿಂಪಡೆಯುವಾಗ ನನಗೆ ‌ಮಾಹಿತಿಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಹೀಗೆ ಮಾಡಬಾರದಿತ್ತು ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನುಡಿಹಬ್ಬ, ಕನ್ನಡದ ಜಾತ್ರೆ ಇದ್ದಂತೆ. 68 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ಜರುಗುತ್ತಿದ್ದು, ಎರಡೂ ಜಿಲ್ಲೆಗಳ ಕನ್ನಡ ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಮಾಧ್ಯಮದವರ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯವಿದೆ. ಸಮ್ಮೇಳನ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡಂತೆ ಜಿಲ್ಲಾಧಿಕಾರಿ, ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಸಮ್ಮೇಳನ ಸ್ಥಳ ನಿಗದಿ, ದಿನಾಂಕ ಗೊತ್ತುಪಡಿಸುವಿಕೆ ಮತ್ತಿತರ ಅಗತ್ಯ ಕ್ರಮಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ಮಹೇಶ ಜೋಶಿ ತಿಳಿಸಿದರು.

ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲೇಶ್ ಗೌಡ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ