ರಾಹುಕಾಲದಲ್ಲಿ ಗೃಹ ಪ್ರವೇಶ ಮಾಡಿ ಅರಿವು ಮೂಡಿಸಿದ ಸಾಹಿತಿ

KannadaprabhaNewsNetwork |  
Published : May 13, 2024, 12:06 AM IST
54 | Kannada Prabha

ಸಾರಾಂಶ

ರಾಹುಕಾಲ ಎಂಬ ಹೆಸರು ಹಾಗೂ ಗ್ರಹದ ಜತೆಗೆ ಉಳ್ಳವರು ಬದುಕು ನಡೆಸುತ್ತಿದ್ದು ಅದರೊಂದಿಗೆ ದಲಿತರು ಮತ್ತು ಅಸ್ಪೃಶ್ಯರ ಜೀವನದ ಜತೆಯಲ್ಲಿ ಬದುಕಿನ ಆಟ ನಡೆಸುತ್ತಿದ್ದು ಇವೆಲ್ಲಕ್ಕೂ ಅಂತ್ಯವಾಡಬೇಕಾದರೆ ನಾವು ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಜೀವನ ಸಾಗಿಸಿ ವೈಚಾರಿಕ ಮತ್ತು ವೈಜ್ಞಾನಿಕದೆಡೆಗೆ ಸಾಗಿ ಬದುಕು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್‌. ನಗರ

ಕಂದಾಚಾರ ಮತ್ತು ಮೂಢ ನಂಬಿಕೆಗಳಿಗೆ ಜನರು ಒತ್ತು ಕೊಟ್ಟು ಅದರಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ಕೆಟ್ಟ ಪರಂಪರೆಯನ್ನು ತ್ಯಜಿಸಿ ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯವನ್ನು ಸಾಕಾರಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕರೆ ನೀಡಿದರು.

ಪಟ್ಟಣದ ಈಶ್ವರನಗರದಲ್ಲಿ ಸಾಹಿತಿ ಎನ್.ಆರ್. ಶಿವರಾಂ ದಂಪತಿ ನಿರ್ಮಿಸಿರುವ ಆದರ್ಶ ನಿಲಯದ ಗೃಹ ಪ್ರವೇಶವನ್ನು ರಾಹುಕಾಲದಲ್ಲಿ ನೆರವೇರಿಸಿ, ಕಟು ಸಂಪ್ರದಾಯಗಳಿಗೆ ನಾಂದಿಯಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಸ್ತು ಎಂಬುದು ನಂಬಿಕೆಯಲ್ಲ ಅದು ವೈಜ್ಞಾನಿಕವಾದ ವಿಚಾರ ಹಾಗೂ ಜೀವನ ಸಂಬಂಧಿತ ನಂಬಿಕೆ ಎಂದರಲ್ಲದೆ ಮನೆ ನಿರ್ಮಾಣ ಮಾಡುವಾಗ ಪ್ರಕೃತಿಯ ಜತೆಗೆ ಮನುಷ್ಯನಿಗೆ ಒಡನಾಟವಿರಬೇಕು ಎಂದರು.

ರಾಹುಕಾಲ ಎಂಬ ಹೆಸರು ಹಾಗೂ ಗ್ರಹದ ಜತೆಗೆ ಉಳ್ಳವರು ಬದುಕು ನಡೆಸುತ್ತಿದ್ದು ಅದರೊಂದಿಗೆ ದಲಿತರು ಮತ್ತು ಅಸ್ಪೃಶ್ಯರ ಜೀವನದ ಜತೆಯಲ್ಲಿ ಬದುಕಿನ ಆಟ ನಡೆಸುತ್ತಿದ್ದು ಇವೆಲ್ಲಕ್ಕೂ ಅಂತ್ಯವಾಡಬೇಕಾದರೆ ನಾವು ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಜೀವನ ಸಾಗಿಸಿ ವೈಚಾರಿಕ ಮತ್ತು ವೈಜ್ಞಾನಿಕದೆಡೆಗೆ ಸಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವೈದಿಕ ಸಂಪ್ರದಾಯವನ್ನು ಧಿಕ್ಕರಿಸಿ ರಾಹುಕಾಲದಲ್ಲಿ ತಮ್ಮ ಪತ್ನಿ ಪ್ರಮೀಳಾ ಮತ್ತು ಪುತ್ರ ಆದರ್ಶ ಅವರೊಂದಿಗೆ ಗೃಹ ಪ್ರವೇಶ ಮಾಡಿದ ಸಾಹಿತಿ ಎನ್.ಆರ್. ಶಿವರಾಂ ಮಾತನಾಡಿ, ರಾಹುಕಾಲ ಮತ್ತು ಇತರ ಕೆಟ್ಟ ಕಾಲಗಳನ್ನು ವೈದ್ಯರು ಪಾಲಿಸಿದರೆ ಜಗತ್ತಿನಲ್ಲಿ ರೋಗಿಗಳ ಸ್ಥಿತಿ ಮತ್ತು ಕಥೆ ಏನಾಗಬೇಕು ಎಂಬುದನ್ನು ಅರಿತು ಪ್ರತಿಯೊಬ್ಬರು ಕಾಲಮೇಲೆ ನಿಂತು ಜೀವನ ರೂಪಿಸಿಕೊಳ್ಳಬೇಕು ಎಂದರು.

ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಜನರು ನಂಬಿಕೆ ಮತ್ತು ಕೆಲವು ರೂಢಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಮುಂದೆ ಸರ್ವರೂ ಎಚ್ಚರದ ಬದುಕು ಕಟ್ಟಿಕೊಳ್ಳುವ ದಿಸೆಯಲ್ಲಿ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಿಂತಕ ಮತ್ತು ಸಾಹಿತಿ ಮಹಾರಾಷ್ಟ್ರ ಮೂಲದ ಡಾ. ಕರಿನಿಂಗ್, ಸಮಾಜದ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಿ.ಪಿ. ದೇವರಾಜು, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಶಿವರಾಮ್, ಭೂ ಅಭಿವೃದ್ಧಿ ಇಲಾಖೆಯ ನಿವೃತ್ತ ನಿರ್ದೇಶಕ ಹನುಮಂತಪ್ಪ, ಸಾಹಿತಿ ಶಿವರಾಂ ಅವರ ಮಾತೃಶ್ರೀ ಗಂಗಮ್ಮ, ಪುತ್ರ ಆದರ್ಶ್, ಪುತ್ರಿ ಅಕ್ಷತಾ, ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್, ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ರಾಮಚಂದ್ರ, ತಾಲೂಕು ಎಸ್ಸಿ ಮತ್ತು ಎಸ್ಟಿ ನೌಕರರ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ನಿವೃತ್ತ ನೌಕರರ ಸಂಘದ ನಿರ್ದೇಶಕ ಕೀರ್ತಿಪ್ರಸಾದ್, ಉಪನ್ಯಾಸಕ ಎನ್.ಆರ್. ಕಾಂತರಾಜು, ನಿವೃತ್ತ ಶಿಕ್ಷಕ ಪುಟ್ಟಯ್ಯ ಇದ್ದರು.

ಫೋಟೋ- 12ಎಂವೈಎಸ್‌ 54- ಕೆ.ಆರ್.ನಗರ ಪಟ್ಟಣದ ಈಶ್ವರನಗರದ ನಿವಾಸಿ, ಸಾಹಿತಿ ಎನ್.ಆರ್. ಶಿವರಾಂ ಅವರ ಆದರ್ಶ ನಿಲಯದ ಗೃಹ ಪ್ರವೇಶವನ್ನು ರಾಹುಕಾಲದಲ್ಲಿ ನೆರವೇರಿಸಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!