ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) 21ನೇ ಪದವಿ ಪ್ರದಾನ ಸಮಾರಂಭ ಶನಿವಾರ ಮಂಗಳೂರಿನ ಕಲಾಮ್ ಆಡಿಟೋರಿಯಂನಲ್ಲಿ ನಡೆಯಿತು. 570 ಬಿಇ ಪದವೀಧರರು ಮತ್ತು ಇಬ್ಬರು ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ಅಪರಾಹ್ನ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬಿಸಿನೆಸ್ ಸಿಸ್ಟಮ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೈದರಾಬಾದ್‌ನ ಅನುರಾಗ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರ್ಚನಾ ಮಂತ್ರಿ, ಸಿಮೆನ್ಸ್ ಸಂಸ್ಥೆಯ ಸೀನಿಯರ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ ಆನ್ಸಿ ಜೋವಿತಾ ಕ್ರಾಸ್ಟಾ ಅತಿಥಿಯಾಗಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್, ಕಾಲೇಜಿನ ಅಧ್ಯಕ್ಷ ಡಾ.ಪೀಟರ್ ಪಾಲ್ ಸಲ್ಡಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲಿಗೆದೆಗುಂದದ ಮನೋಭಾವವನ್ನು ಬೆಳೆಸಿಕೊಳ್ಳಲು, ಹಿನ್ನಡೆಗಳನ್ನು ಕಲಿಕೆಯ ಅನುಭವವಾಗಿ ಸ್ವೀಕರಿಸಲು ಮತ್ತು ಜೀವನದ ಪ್ರಮುಖ ಆಧಾರಸ್ತಂಭಗಳಾದ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರನ್ನು ಗೌರವಿಸಲು ಕರೆ ನೀಡಿದರು.ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ರಕ್ಷಾ ಮಂತ್ರಿ ಪ್ರಶಸ್ತಿ ಪಡೆದ ಎನ್‌ಸಿಸಿ ನೇವಿ ಕೆಡೆಟ್ ಲಿಶಾ ಡಿ.ಎಸ್. (ಇಸಿಇ) ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ.ರಿಯೋ ಡಿಸೋಜ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
----