ಕಾರ್ಕಳ: ಬಡವರು, ನಿರ್ಗತಿಕರು ಹಾಗೂ ತುಳಿತಕ್ಕೊಳಗಾದವರ ಕಷ್ಟಗಳನ್ನು ಅರಿತು ಅವರ ಬದುಕಿನಲ್ಲಿ ಸಂತೋಷ ಮೂಡಿಸಲು ಸಾಧ್ಯವಾದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದರು.ಇತಿಹಾಸ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ಸಮರ್ಪಣೆಯ ದಶಮಾನೋತ್ಸವ ಹಾಗೂ ಪಾಲಕ ಸಂತ ಲಾರೆನ್ಸ್ ಹಬ್ಬದ ಪ್ರಯುಕ್ತ ನಡೆದ ಬಲಿಪೂಜೆ ಬಳಿಕ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧರ್ಮಸಭೆಯ ಸಂಪತ್ತನ್ನು ಬಡವರು ಹಾಗೂ ನಿರ್ಗತಿಕರಿಗಾಗಿ ಹಂಚಿದ ಸಂತ ಲಾರೆನ್ಸ್ ಎಲ್ಲರಿಗೂ ಆದರ್ಶಪ್ರಾಯರು. ಅವರು ಬೋಧಿಸಿದ ಹಾಗೂ ಜೀವನದಲ್ಲಿ ಅಳವಡಿಸಿಕೊಂಡ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ಬಾಸಿಲಿಕಾದ ಅಭಿವೃದ್ಧಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು. ‘ಕ್ರಿಸ್ತ ಕೃಪ’ ಕಟ್ಟಡದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಬಾಸಿಲಿಕಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ವಂ. ಅಲ್ಬನ್ ಡಿಸೋಜ, ವಂ. ಜಾರ್ಜ್ ಡಿಸೋಜ ಹಾಗೂ ವಂ. ರೋಮನ್ ಮಸ್ಕರೇನಸ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಹಾಗೂ ಹಾಲಿ ಧರ್ಮಾಧ್ಯಕ್ಷರನ್ನೂ ಗೌರವಿಸಲಾಯಿತು.
ಬಾಸಿಲಿಕಾದ ನಿರ್ದೇಶಕ ವಂ. ಅಲ್ಬನ್ ಡಿಸೋಜ ಸ್ವಾಗತಿಸಿ, ಪಾಲನಾ ಮಂಡಳಿ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ ದಶಮಾನೋತ್ಸವ ವರದಿ ವಾಚಿಸಿದರು. ಉಪಾಧ್ಯಕ್ಷ ವಂದೀಶ್ ಮಥಾಯಸ್ ವಂದಿಸಿದರು. ವಿಲ್ಸನ್ ಟೆಲ್ಲಿಸ್ ನಿರೂಪಿಸಿದರು. ವಿಕಾರ್ ಜನರಲ್ ಅತಿ ವಂ. ಮೊನ್ಸಿಂಜರ್ ಫ್ರಾನ್ಸಿಸ್ ಲುವಿಸ್ ಹಾಗೂ ಪಾಲನಾ ಆಯೋಗಗಳ ಸಂಯೋಜಕಿ ರೀಟಾ ಲೋಬೊ ಇದ್ದರು.