ಸಿದ್ದಾಪುರ: ವಾಣಿಜ್ಯ ಕ್ಷೇತ್ರದಲ್ಲಿ ತೊಡಗಿಕೊಂಡ ಸಂಸ್ಥೆಗಳು ಸಮಾಜದ ಏಳ್ಗೆಗೆ ಕೈಜೋಡಿಸಿದಾಗ ಹೆಚ್ಚಿನ ಬದಲಾವಣೆ ಸಾಧ್ಯ ಎಂದು ಸ್ಥಳೀಯ ಹೋಲಿ ರೋಜಾರಿಯೋ ಚರ್ಚಿನ ಧರ್ಮಗುರು ಫಾ.ಸಿರಿಲ್ ಫರ್ನಾಂಡಿಸ್ ಹೇಳಿದರು.ಅವರು ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಸಿದ್ದಾಪುರ ಶಾಖೆಯ ವತಿಯಿಂದ ಪಟ್ಟಣದ ಹಾಳತಕಟ್ಟಾದ ಆಶಾಕಿರಣ ಟ್ರಸ್ಟನ ಮುರುಘರಾಜೇಂದ್ರ ಅಂಧರಶಾಲೆಯ ಅಂಧಮಕ್ಕಳಿಗೆ ಅಗತ್ಯವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಅಂಧಮಕ್ಕಳು ತಮಗೆ ಹೊರಜಗತ್ತು ಕಾಣುತ್ತಿಲ್ಲ ಎನ್ನುವ ಬೇಸರಪಡುವ ಅಗತ್ಯವಿಲ್ಲ. ನಿಮಗೆ ಒಳಗಣ್ಣು ಅತ್ಯಂತ ಶಕ್ತಿಶಾಲಿಯಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ನಮ್ಮ ಸಂಪತ್ತನ್ನು ಹಂಚಿಕೊಂಡಾಗ, ಒಳ್ಳೆಯದನ್ನು ಮಾಡಿದಾಗ ದೇವರು ಆಶೀರ್ವದಿಸುತ್ತಾನೆ. ಇನ್ನು ಹೆಚ್ಚಿನ ಇಂಥ ಸಮಾಜಮುಖಿಯಾದ ಕಾರ್ಯ ಮಾಡಲು ಈ ಸಂಸ್ಥೆಗೆ ಶಕ್ತಿ ದೊರಕಲಿ ಎಂದರು.
ಮುಖ್ಯ ಅತಿಥಿ ಆಶಾಕಿರಣ ಟ್ರಸ್ಟನ ಉಪಾಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ, ಗ್ರಾಹಕ ಸ್ನೇಹಿಯಾದ ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಮಾನವೀಯ ಕಾಳಜಿಯನ್ನು ಹೊಂದಿದೆ. ಇಲ್ಲಿನ ಮಕ್ಕಳಿಗೆ ಅಗತ್ಯವಸ್ತುಗಳನ್ನು ನೀಡಿರುವುದು ಬ್ಯಾಂಕ್‌ನ ವಿಶಾಲ ಮನೋಭಾವಕ್ಕೆ ಸಾಕ್ಷಿ ಎಂದರು.ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ಸಂಸ್ಥೆಯ ಲಾಭಾಂಶದ ಭಾಗವನ್ನು ಸರ್ಕಾರದ ನಿಯಮದ ಪ್ರಕಾರ ಕಾಟಾಚಾರಕ್ಕಾಗಿ ವ್ಯಯ ಮಾಡದೇ ಸಮಾಜದ ಅಸಹಾಯಕರಿಗೆ, ನೊಂದವರಿಗೆ ನೀಡುತ್ತಿರುವದು ಅತ್ಯಂತ ಮಾದರಿಯ ಕಾರ್ಯ ಎಂದರು.
ವೇದಿಕೆಯಲ್ಲಿ ಆಶಾಕಿರಣ ಟ್ರಸ್ಟ್ ಪದಾಧಿಕಾರಿ ವಾಸುದೇವ ಶೇಟ್, ಸ್ಥಳೀಯ ಶಾಖೆಯ ವ್ಯವಸ್ಥಾಪಕ ಲೋಕೇಶ ನಾಯ್ಕ, ಅಧಿಕಾರಿಗಳಾದ ಚಿನ್ಮಯ ಹೆಗಡೆ, ರಾಘವೇಂದ್ರ ಭಂಡಾರಿ, ಸಿಬ್ಬಂದಿ ಇದ್ದರು.
ಸಿಬ್ಬಂದಿ ಯಶೋದಾ ನಾಯ್ಕ ಸ್ವಾಗತಿಸಿದರು. ಪವಿತ್ರಾ ವಂದಿಸಿದರು. ಸೌಮ್ಯಾ ನಿರ್ವಹಿಸಿದರು.