ಸಕಲೇಶಪುರದಲ್ಲಿ ಬೆಳೆ ಹಾನಿ ಸಮೀಕ್ಷೆ

KannadaprabhaNewsNetwork |  
Published : Oct 10, 2026, 01:45 AM IST
9ಎಚ್ಎಸ್ಎನ್7 : ನಾಟಿ ಮಾಡಿದ ಗದ್ದೆಗಳು ನೀರಿಲ್ಲದೆ ಒಣಗಿ ಬಿರುಕು ಬಿಟ್ಟಿರುವುದು. | Kannada Prabha

ಸಾರಾಂಶ

2026 27ನೇ ಸಾಲಿನ ಮುಂಗಾರು ಮಳೆಯ ಅಸಮರ್ಪಕ ಹಂಚಿಕೆ ಹಾಗೂ ತಡವಾಗಿ ಆರಂಭವಾದ ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬರ ಅಧ್ಯಯನ ಹಾಗೂ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷಾ ತಂಡಗಳಿಗೆ ರೈತರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ. ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

2026–27ನೇ ಸಾಲಿನ ಮುಂಗಾರು ಮಳೆಯ ಅಸಮರ್ಪಕ ಹಂಚಿಕೆ ಹಾಗೂ ತಡವಾಗಿ ಆರಂಭವಾದ ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬರ ಅಧ್ಯಯನ ಹಾಗೂ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷಾ ತಂಡಗಳಿಗೆ ರೈತರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ. ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 2,247 ಮಿ. ಮೀ. ಆಗಿದ್ದು, 2026ರ ಸೆ.17ರವರೆಗೆ 1,944 ಮಿ.ಮೀ. ಮಳೆಯಾಗಿದೆ. ಆದರೆ, ಮಳೆಯು ತಾಲೂಕಾದ್ಯಂತ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಹೆಚ್ಚಿನ ಮಳೆ ಕೆಲವೇ ದಿನಗಳಿಗೆ ಸೀಮಿತವಾಗಿದ್ದು, ಬಿದ್ದ ಮಳೆಯ ಬಹುಭಾಗ ಹರಿದು ಹಳ್ಳಗಳನ್ನು ಸೇರಿದೆ. ಇದರಿಂದ ಬೆಳೆಗಳಿಗೆ ಅಗತ್ಯವಾದ ತೇವಾಂಶ ದೊರೆಯದೆ, ಅಂತರ್ಜಲ ಮರುಪೂರಣಕ್ಕೂ ತೊಂದರೆಯಾಗಿದೆ. 2024ರಲ್ಲಿ 3,843 ಮಿ.ಮೀ. ಹಾಗೂ 2025ರಲ್ಲಿ 4,357 ಮಿ.ಮೀ. ಮಳೆಯಾಗಿತ್ತು ಎಂದು ಪ್ರಕಟಣೆ ತಿಳಿಸಿದ್ದಾರೆ.

ಮುಂಗಾರು ಮಳೆ ತಡವಾಗಿ ಆರಂಭವಾದ ಪರಿಣಾಮ ಬಿತ್ತನೆ ಕಾರ್ಯ ವಿಳಂಬವಾಗಿದೆ. ತಾಲೂಕಿನಲ್ಲಿ ಭತ್ತದ ಸಾಮಾನ್ಯ ವಾರ್ಷಿಕ ಕೃಷಿ ವಿಸ್ತೀರ್ಣ 5,150 ಹೆಕ್ಟೇರ್‌ಗಳಾಗಿದ್ದರೂ, ಪ್ರಸಕ್ತ ಸಾಲಿನಲ್ಲಿ ಸುಮಾರು 3,400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಮಾಡಲಾಗಿದೆ ಎಂದರು. ತಾಲೂಕಿನ 26 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 221 ಕಂದಾಯ ಗ್ರಾಮಗಳ ಪೈಕಿ ತಂತ್ರಾಂಶದ ಮೂಲಕ ಆಯ್ಕೆಯಾದ ಶೇ.10ರಷ್ಟು ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಲಾಗುತ್ತಿದೆ. ಆಯ್ಕೆಯಾದ ಗ್ರಾಮಗಳಲ್ಲಿ ಬೆಳೆಗಳ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ, ಜಿಯೋ-ಟ್ಯಾಗ್ ಮೂಲಕ ಮಾಹಿತಿ ದಾಖಲಿಸಲಾಗುತ್ತದೆ ಎಂದಿದ್ದಾರೆ.

ಹೋಬಳಿವಾರು ಸಮೀಕ್ಷಾ ವಿವರಗಳು:

ಬೆಳಗೋಡು ಹೋಬಳಿಯ ಕಾಕನಮನೆ, ಈಶ್ವರಹಳ್ಳಿ, ರಾಜೇಂದ್ರಪುರ; ಹಾನುಬಾಳು ಹೋಬಳಿಯ ಬಾಚನಹಳ್ಳಿ, ನೀಕನಹಳ್ಳಿ, ಮಾದನಾಪುರ, ಮರಗಡಿ, ಕುಮಾರಹಳ್ಳಿ, ಹೊಡಚಹಳ್ಳಿ; ಕಸಬಾ ಹೋಬಳಿಯ ಮಳಲಿ, ಹೆಬ್ಬಸಾಲೆ, ಮಾಸವಳ್ಳಿ, ಆಚಂಗಿ, ಕೊಲ್ಲಹಳ್ಳಿ; ಹೆತ್ತೂರು ಹೋಬಳಿಯ ಕರಡಿಗಾಲ, ವಡ್ಡರಹಳ್ಳಿ ಹಾಗೂ ಯಸಳೂರು ಹೋಬಳಿಯ ಅತ್ತಿಗನಹಳ್ಳಿ, ಸುಂಡಳ್ಳಿ, ತಡಕಲು ಗ್ರಾಮಗಳಲ್ಲಿ ಸಮೀಕ್ಷೆ ನಡೆಯಲಿದೆ. ಆಯಾ ಹೋಬಳಿಗಳಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಸೆ.10ರಿಂದ ಆಯ್ಕೆಯಾದ ಪ್ರತಿ ಗ್ರಾಮದಲ್ಲಿ ಐದು ತಾಕುಗಳನ್ನು ಆಯ್ಕೆ ಮಾಡಿಕೊಂಡು, ‘ರೈತರ ಬೆಳೆ ಹಾನಿ ಸಮೀಕ್ಷೆ–2026’ ಮೊಬೈಲ್ ಆಪ್ ಮೂಲಕ ಬೆಳೆಗಳ ಸ್ಥಿತಿಯನ್ನು ದಾಖಲಿಸುವ ಕಾರ್ಯ ಕೈಗೊಳ್ಳಲಾಗಿದೆ. ಸಮೀಕ್ಷೆಯ ವೇಳೆ ಬೆಳೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿ ದಾಖಲಿಸಿ ಜಿಯೋ-ಟ್ಯಾಗ್ ಮಾಡಲಾಗುತ್ತದೆ ಎಂದರು.

ತಾಲೂಕಿನ ಕೃಷಿ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಲು ಈ ಸಮೀಕ್ಷೆ ಮಹತ್ವದ್ದಾಗಿದೆ. ಆದ್ದರಿಂದ ಆಯ್ಕೆಯಾದ ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ಭೇಟಿ ನೀಡುವ ಸಮೀಕ್ಷಾ ತಂಡಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಮುನ್ನವೇ ಕಟ್ಟಡ ಬಿರುಕು
ಬಸರವಳ್ಳಿ ಪಂಚಾಯಿತಿ ಹಸಲರ ವಾರ್ಡಿಗೆ ಬೇಕಿದೆ ಸಂಪರ್ಕ ಸೇತುವೆ