ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರ ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಇದೀಗ ಅಧಿಕೃತವಾಗಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟವನ್ನು ಸಂಘಟಿತವಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು. ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್ ಅವರು ₹100 ಕೋಟಿ ಅನುದಾನ ತರುವುದಾಗಿ ತಿಳಿಸಿದ್ದಾರೆ. ಈ ಅನುದಾನವನ್ನು ಬಳಸಿಕೊಂಡು ರಸ್ತೆ ಅಗಲೀಕರಣದ ಜತೆಗೆ ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಬೇಕು. ಪಾರಂಪರಿಕ ಕಟ್ಟಡಗಳು ಯಥಾಸ್ಥಿತಿಯಲ್ಲಿದ್ದರೆ ಅವುಗಳಿಗೆ ಪರಿಹಾರ ನೀಡಬೇಕು. ಆದರೆ, ಅಗತ್ಯಕ್ಕಿಂತ ಮುಂದೆ ವಿಸ್ತರಿಸಿ ರಸ್ತೆ ಜಾಗವನ್ನು ಆಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದರೆ, ಅಂತಹ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡಬಾರದು. ಈ ಕುರಿತು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾರ್ಚ್ 1ರೊಳಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸೇರಿದಂತೆ ಪೂರ್ವಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನಿರ್ಲಕ್ಷ್ಯ ವಹಿಸಿದರೆ ಮುಂದಿನ ಹಂತದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಬಿಜೆಪಿ ಮುಖಂಡ ಜೈಮಾರುತಿ ದೇವರಾಜ್ ಮಾತನಾಡಿ, ಸಕಲೇಶಪುರ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಪಾರ್ಕಿಂಗ್ ವ್ಯವಸ್ಥೆಯ ಕೊರತೆಯಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಗಲೀಕರಣದಿಂದ ಸಂಚಾರ ಸುಗಮವಾಗುವುದರ ಜತೆಗೆ ವ್ಯಾಪಾರ ವಹಿವಾಟುಗಳಿಗೂ ಉತ್ತೇಜನ ದೊರೆಯಲಿದೆ. ಕೆಲವರಿಗೆ ತೊಂದರೆಯಾಗಬಹುದಾದರೂ, ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪರಿಹಾರ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು. ರಸ್ತೆ ಅಗಲೀಕರಣ ಸಾರ್ವಜನಿಕರ ಬೇಡಿಕೆಯಾಗಿದ್ದು, ರಾಜಕೀಯ ಭೇದ ಮರೆತು ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ಸ್ಥಳೀಯ ನಿವಾಸಿಗಳು ಹಾಗೂ ಮಾಧ್ಯಮದವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ನೀಡಬೇಕು. ಬೈಪಾಸ್ ರಸ್ತೆ ನಿರ್ಮಾಣದ ಬಳಿಕ ಪಟ್ಟಣದ ವ್ಯಾಪಾರ ವಹಿವಾಟು ಕುಂಠಿತವಾಗಿದ್ದು, ಪಾರ್ಕಿಂಗ್ ಕೊರತೆಯೂ ಸಮಸ್ಯೆಯಾಗಿದೆ. ರಸ್ತೆ ಅಗಲೀಕರಣದಿಂದ ಪಟ್ಟಣದ ಸೌಂದರ್ಯ ಹಾಗೂ ವ್ಯಾಪಾರ ಚಟುವಟಿಕೆಗಳು ಸುಧಾರಿಸಲಿವೆ. ಸರ್ಕಾರ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮಾರ್ಚ್‌ವರೆಗೆ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಪ್ರಗತಿ ಕಾಣದಿದ್ದರೆ ಸಮಿತಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಿದೆ ಎಂದರು.