
ಇನ್ನು ಈ ಮಾರ್ಗದಲ್ಲಿ ವಿದ್ಯುತ್ ರೈಲು ಸಂಚಾರ, ವಂದೇ ಭಾರತ್ ಓಡಾಟ ಸಲೀಸು
ವಂದೇ ಭಾರತ್ ಸಹಿತ ವಿದ್ಯುತ್ ರೈಲುಗಳ ಓಡಾಟಕ್ಕೆ ಇದರಿಂದ ಅನುಕೂಲವಾಗಲಿದೆ.ಘಾಟ್ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೆಯ ಅತ್ಯಂತ ತಾಂತ್ರಿಕ ಸವಾಲಿನ ವಿಭಾಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 1ಕ್ಕೆ 50ರಷ್ಟು ಗ್ರೇಡಿಯಂಟ್, 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ವಕ್ರಗಳು ಇರುವುದರ ಜೊತೆಗೆ, ಭೂಕುಸಿತಗಳಿಗೆ ಹೆಚ್ಚು ಒಳಪಡುವ ಪ್ರದೇಶವಾಗಿರುವುದರಿಂದ, ವಿದ್ಯುದೀಕರಣ ಕಾರ್ಯ ಅತ್ಯಂತ ಸಂಕೀರ್ಣವಾಗಿತ್ತು.ವಿದ್ಯುದೀಕರಣ ಕಾರ್ಯ 01.12.2023 ರಂದು ಆರಂಭಗೊಂಡು 93.55 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ.
ಈ ಯೋಜನೆಯಡಿ ಮಾರ್ಗದೊಳಗೆ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಹಾಗೂ ಸಂಪೂರ್ಣ ವಿಭಾಗದಲ್ಲಿ ಮೇಲ್ಮೈ ವಿದ್ಯುದೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮೇಲ್ಮೈ ವಿದ್ಯುತ್ ವ್ಯವಸ್ಥೆಯನ್ನು ಗರಿಷ್ಠ 120 ಕಿಮೀ ಪ್ರತಿ ಗಂಟೆ ವೇಗಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಎರಡು ವಿದ್ಯುತ್ ಕಂಬಗಳ ನಡುವಿನ ಗರಿಷ್ಠ ಅಂತರವನ್ನು 67.5 ಮೀಟರ್‌ಗೆ ಮಿತಿಗೊಳಿಸಲಾಗಿದೆ. ಇದರಿಂದ ಕಾರ್ಯಾಚರಣಾ ಸುರಕ್ಷತೆಗೆ ಅನುಕೂಲವಾಗಲಿದೆ.ಈ ವಿಭಾಗದಲ್ಲಿರುವ 57 ಸುರಂಗಗಳಲ್ಲಿ ಮೇಲ್ಮೈ ವಿದ್ಯುತ್ ಸಾಧನಗಳ ಅಳವಡಿಕೆಗೆ 419 ಮುಖ್ಯ ಬ್ರಾಕೆಟ್‌ಗಳು ಮತ್ತು 419 ಹೆಚ್ಚುವರಿ (ಸ್ಪೇರ್) ಬ್ರಾಕೆಟ್‌ಗಳನ್ನು ಒದಗಿಸಲಾಗಿದೆ. ಸುರಂಗಗಳ ಲೈನ್ಡ್ ಹಾಗೂ ಅನ್ಲೈನ್ಡ್ ಭಾಗಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸವಿಸ್ತಾರವಾದ ಭೌಗೋಳಿಕ ಸಮೀಕ್ಷೆಗಳನ್ನು ನಡೆಸಲಾಗಿದೆ. ಪ್ರತಿಯೊಂದು ಬ್ರಾಕೆಟ್ ಸ್ಥಳದಲ್ಲಿಯೂ ಬೋಲ್ಟ್‌ಗಳ ಸಮರ್ಪಕ ಗ್ರೌಟಿಂಗ್ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಲು ಪುಲ್-ಔಟ್ ಪರೀಕ್ಷೆಗಳನ್ನು ನಡೆಸಲಾಗಿದೆ.
ವಿದ್ಯುದೀಕರಣ ಕಾರ್ಯ ಮತ್ತು ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ಸಂಪೂರ್ಣ ಘಾಟ್ ವಿಭಾಗ ಈಗ ವಿದ್ಯುತ್ ರೈಲು ಸಂಚಾರಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಸಾಧನೆ ಭಾರತೀಯ ರೈಲ್ವೆಯ ಶೇಕಡಾ 100 ವಿದ್ಯುದೀಕರಣ ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ.