ಕಂಪ್ಲಿ: ಪ್ರತಿಭಾಕಾರಂಜಿ ಹಾಗೂ ಕಲೋತ್ಸವಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿನ ಅಡಗಿರುವ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಮೂಲಕ ಅವರ ಭವಿಷ್ಯದ ಬದುಕನ್ನು ಉತ್ತಮಗೊಳಿಸುತ್ತವೆ ಎಂದು ಸಿಆರ್‌ಪಿ ಎ.ಗಂಗಾಧರ ಹೇಳಿದರು.ಪಟ್ಟಣದ ಬಿಎಸ್‌ವಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 8ನೇ ವಾರ್ಡ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಒಟ್ಟು 31 ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. 41 ವಿವಿಧ ಸ್ಪರ್ಧೆಗಳು ನಡೆದಿವೆ. ಸಂಗೀತ, ನೃತ್ಯ, ನಾಟಕ, ಭಾಷಣ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಕಾರ್ಯಕ್ರಮವು ಮಕ್ಕಳಲ್ಲಿ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಕಂಪ್ಲಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಮಾತನಾಡಿ, ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಅತ್ಯವಶ್ಯಕವಾಗಿದೆ. ಶಿಕ್ಷಕರು ಮಕ್ಕಳಲ್ಲಿ ಸ್ವತಂತ್ರವಾಗಿ ಆಲೋಚಿಸುವ ಶಕ್ತಿ, ಸಮಾಜಮುಖಿ ಚಿಂತನೆ ಹಾಗೂ ಜವಾಬ್ದಾರಿಯುತ ನಾಗರಿಕತ್ವವನ್ನು ಬೆಳೆಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ಸುಜಾತ, ಎಚ್.ದೊಡ್ಡಬಸಪ್ಪ, ಎಂ.ಎ. ನಾಗನಗೌಡ, ಹನುಮಂತಪ್ಪ, ಸುನೀತಾ ಪೂಜಾರಿ, ಮಂಜುನಾಥ, ಜೋಗಿನಾಯಕ ರುದ್ರಪ್ಪ, ಎಂ.ರೇವಣ್ಣ, ಟಿ.ಎಂ.ಬಸವರಾಜ, ಎನ್.ಬಿ. ರೇಣುಕಾರಾಧ್ಯ, ಭುವನೇಶ್ವರ್, ಕರುಣಾಕರಾಚಾರ್, ಎಸ್. ಶಾಮಸುಂದರರಾವು, ಕೆ. ವಿರುಪಾಕ್ಷಪ್ಪ, ಆರ್. ಬಸವರಾಜ್, ರಾಜು ಬಿಲಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.