ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ: ಅಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Jul 11, 2026, 01:00 AM IST
ಸ | Kannada Prabha

ಸಾರಾಂಶ

ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗುತ್ತಿವೆ. ರೈತರಿಗೆ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿದೆ.

ಸಿರುಗುಪ್ಪ: ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ಹಾಗೂ ಕರ್ತವ್ಯ ಲೋಪ ಎಸಗುತ್ತಿರುವ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯಿಸಿ ಉಪತಹಶೀಲ್ದಾರ್ ಸಿದ್ದಾರ್ಥ ಕಾರಂಜಿ ಅವರಿಗೆ ಮನವಿ ಸಲ್ಲಿಸಿದರು.

ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಕೆ.ಎರ್ರಿಸ್ವಾಮಿ ಮಾತನಾಡಿ, ಸಿರುಗುಪ್ಪ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗುತ್ತಿವೆ. ರೈತರಿಗೆ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ತಾಲೂಕಿನ ಕೆಲವು ರಸಗೊಬ್ಬರ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಗೊಬ್ಬರವನ್ನು ಮಾರಾಟ ಮಾಡುತ್ತಾ ರೈತರನ್ನು ಬಹಿರಂಗವಾಗಿ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.

ಕೃತಕ ಅಭಾವ ಸೃಷ್ಟಿಸಿ, ರಸಗೊಬ್ಬರದ ಜೊತೆಗೆ ರೈತರಿಗೆ ಬೇಡದ ಇತರೆ ಅನಗತ್ಯ ಕಿಟ್‌ಗಳನ್ನು ಅಥವಾ ಕೀಟನಾಶಕಗಳನ್ನು ಕಡ್ಡಾಯವಾಗಿ ಖರೀದಿಸಬೇಕೆಂದು ಒತ್ತಾಯಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ದಂಧೆಯ ಮಾರುಕಟ್ಟೆ ಕುರಿತು ತಾಲೂಕು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದರೂ ಅವರು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು, ಅವರು ಈ ಅಕ್ರಮ ದಂಧೆಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಅಧಿಕಾರಿಗಳ ಈ ಕರ್ತವ್ಯ ಲೋಪದಿಂದಾಗಿ ಬಡ ರೈತರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ.

ತಾಲೂಕಿನ ಎಲ್ಲ ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ತಕ್ಷಣ ದಾಳಿ ನಡೆಸಿ, ಬೆಲೆ ಪಟ್ಟಿಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿ ಅಧಿಕ ಬೆಲೆಗೆ ಮಾರಾಟ ಮಾಡುವ ಹಾಗೂ ಕೃತಕ ಅಭಾವ ಸೃಷ್ಟಿಸುವ ಅಂಗಡಿಗಳ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಿ, ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.

ಪ್ರತಿ ಅಂಗಡಿಯ ಮುಂಭಾಗದಲ್ಲಿ ಸರ್ಕಾರದ ನಿಗದಿತ ಬೆಲೆ ಪಟ್ಟಿ ಹಾಗೂ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಮಳೆ ಆಗದೆ ಇರುವುದು ಹಾಗೂ ಇತರೆ ಕಾರಣಗಳಿಂದ ಸಂಕಷ್ಟದಲ್ಲಿರುವ ತಾಲೂಕಿನ ರೈತರ ಹಿತದೃಷ್ಟಿಯಿಂದ ತಹಶೀಲ್ದಾರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಯಲ್ಲಪ್ಪ, ಮಹಾನಂದಿ, ಸಣ್ಣ ಭಾಷ, ಶಿವಪ್ಪ, ಗಾದಿಲಿಂಗಪ್ಪ, ಗಂಗಾಧರ, ಜಿಲಾನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ