ಚಕ್ರಾನದಿ ಸೇರಿದ ಸಮುದ್ರ ನೀರು । ನದಿ ದಂಡೆ ಸಂರಕ್ಷಣಾ ಕಾಮಗಾರಿ ಬೇಡಿಕೆಗೆ ಸಿಗುತ್ತಿಲ್ಲ ಸ್ಪಂದನೆ
ಶ್ರೀಕಾಂತ ಹೆಮ್ಮಾಡಿಕನ್ನಡಪ್ರಭ ವಾರ್ತೆ ಕುಂದಾಪುರ
ಕಳೆದ ವಾರದಿಂದ ಇಲ್ಲಿನ ಚಕ್ರಾನದಿಗೆ ಸಮುದ್ರದ ನೀರು ನುಗ್ಗಿದ್ದು, ನದಿತೀರದ ನೂರಾರು ಎಕರೆ ಕೃಷಿ ಗದ್ದೆಗಳು ಉಪ್ಪು ನೀರಿನಿಂದಾವೃತಗೊಂಡು ಕೃಷಿಕರು ಬೆಳೆ ನಾಶದ ಭೀತಿ ಎದುರಿಸುತ್ತಿದ್ದಾರೆ.ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟು, ಮೂವತ್ತುಮುಡಿ, ಬುಗ್ರಿಕಡು, ಕೋಟೆಬೆಟ್ಟು, ಹೊಸ್ಕಳಿ ಭಾಗದ ಕೃಷಿಕರು ಗದ್ದೆಗಳಿಗೆ ನುಗ್ಗಿದ ಉಪ್ಪು ನೀರಿನಿಂದಾಗಿ ಕಂಗೆಟ್ಟಿದ್ದಾರೆ. ಮುಂಗಾರುವಿನಲ್ಲಿ ಭತ್ತದ ಬೆಳೆ ಬೆಳೆಯುವ ಇಲ್ಲಿನ ಕೃಷಿಕರು, ಆ ಬಳಿಕ ಹಿಂಗಾರು ಹಂಗಾಮಿನಲ್ಲಿ ಉದ್ದು ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಇದೀಗ ಏಕಾಏಕಿ ನದಿ ತೀರದ ಕೃಷಿಗದ್ದೆಗಳಿಗೆ ಉಪ್ಪು ನೀರು ನುಗ್ಗಿದ್ದರಿಂದ ರೈತರು ಬೆಳೆದ ಕೃಷಿ ಸಂಪೂರ್ಣ ನಾಶಗೊಂಡಿದೆ.ಕುಡಿಯುವ ನೀರಿಗೂ ತತ್ವಾರ:ವಾರಗಳಿಂದ ಗದ್ದೆಗಳಲ್ಲಿ ಉಪ್ಪು ನೀರು ತುಂಬಿಕೊಂಡಿದ್ದರಿಂದ ಸಮೀಪದ ವಸತಿ ಪ್ರದಶಗಳಲ್ಲಿನ ಕುಡಿಯುವ ನೀರಿನ ಬಾವಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ಉಪ್ಪಿನ ಅಂಶ ಕಂಡುಬಂದಿದೆ. ಇದರಿಂದ ಕುಡಿಯುವುದಕ್ಕೆ ಬಳಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ನಿವಾಸಿಗಳ ಕೂಗಿಗೆ ಸಿಕ್ಕಿಲ್ಲ ಸ್ಪಂದನೆ:
ನದಿ ತೀರ ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ನೆರೆ ನೀರಿನ ಸಮಸ್ಯೆ ಎದುರಿಸಿದರೆ, ಬೇಸಿಗೆಯಲ್ಲಿ ಉಪ್ಪು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ನದಿ ತೀರದ ಪ್ರದೇಶಗಳಲ್ಲಿ ನದಿ ಸಂರಕ್ಷಣಾ ತಡೆಗೋಡೆ ನಿರ್ಮಿಸಿದರೆ ಮಾತ್ರ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬಹುದಾಗಿದೆ. ನದಿ ದಂಡೆ ಸಂರಕ್ಷಣಾ ತಡೆಗೋಡೆ ಕಾಮಗಾರಿಗೆ ಅನುದಾನ ಒದಗಿಸಿ ಎನ್ನುವ ನದಿ ತೀರ ಪ್ರದೇಶ ನಿವಾಸಿಗಳ ದಶಕಗಳ ಕೂಗಿಗೆ ಇದುವರೆಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಇಲ್ಲ. ಇಲ್ಲಿನ ನಿವಾಸಿಗಳು ಶಾಸಕರನ್ನು ಪ್ರಶ್ನಿಸಿದರೆ ಅನುದಾನಗಳ ಕೊರತೆ ಎನ್ನುವ ಉತ್ತರ ಬಿಟ್ಟರೆ ಬೇರೆ ಉತ್ತರ ಇಲ್ಲ. ಕಾಮಗಾರಿಗಳಿಗೆ ಅನುದಾನ ಒದಗಿಸದೆ ಗ್ಯಾರಂಟಿ ಯೋಜನೆಯಲ್ಲೇ ಮುಳುಗಿರುವ ಸರ್ಕಾರಕ್ಕೂ ನದಿ ತೀರ ನಿವಾಸಿಗಳ ಕೂಗು ಕೇಳಿಸುತ್ತಿಲ್ಲ.----------------ಹೆಮ್ಮಾಡಿ ಸೇವಂತಿ ಕೃಷಿಗೂ ಭೀತಿ!ಹವಮಾನ ವೈಪರಿತ್ಯ ಮುಂತಾದ ಕಾರಣಗಳಿಂದ ಅಳವಿನಂಚಿಗೆ ಬಂದು ನಿಂತಿರುವ ಸಾಕಷ್ಟು ಪ್ರಸಿದ್ಧಿ ಪಡೆದ ಹೆಮ್ಮಾಡಿ ಸೇವಂತಿಗೆ ಕೃಷಿಗೂ ಉಪ್ಪು ನೀರಿನ ಹಾವಳಿ ಸಂಕಷ್ಟ ತಂದೊಡ್ಡಿದೆ. ಸೇವಂತಿ ಕೃಷಿ ಗದ್ದೆಗಳ ಸುತ್ತಲೂ ಉಪ್ಪು ನೀರು ತುಂಬಿಕೊಂಡಿದ್ದರಿಂದ ಎರಡನೇ ಬೆಳೆಯ ಕಟಾವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ಆತಂಕ ಎದುರಾಗಿದೆ. ಸುತ್ತಲೂ ಉಪ್ಪು ನೀರು ಆವೃತಗೊಂಡಿದ್ದರಿಂದ ಸೇವಂತಿಗೆ ಹೂವುಗಳು ಕರಟಿ ಹೋಗುವ ಸಾಧ್ಯತೆಗಳಿವೆ ಎಂದು ಇಲ್ಲಿನ ಸೇವಂತಿ ಕೃಷಿಕರು ಕನ್ನಡಪ್ರಭದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.----------------------ಈಗಾಗಲೇ ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ನದಿತೀರ ಪ್ರದೇಶಗಳಿಗೆ ನದಿ ದಂಡೆ ಸಂರಕ್ಷಣಾ ಕಾಮಗಾರಿಗಾಗಿ ೨೦೨೪-೨೫ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಅನುದಾನ ಮಂಜೂರು ಮಾಡುವ ಬಗ್ಗೆ ಮನವಿ ತಯಾರಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಮೂಲಕ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಅವರನ್ನು ಸಂಪರ್ಕಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಸಚಿವರ ಸಮಯ ನಿಗದಿಪಡಿಸಿಕೊಂಡು ಮಾಜಿ ಶಾಸಕರೊಂದಿಗೆ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಲಾಗುವುದು.
। ಯು. ಸತ್ಯನಾರಾಯಣ್ ರಾವ್, ಮಾಜಿ ಅಧ್ಯಕ್ಷರು, ಸದಸ್ಯರು ಗ್ರಾ.ಪಂ ಹೆಮ್ಮಾಡಿ----------------
ಉಪ್ಪು ನೀರಿನ ಸಮಸ್ಯೆಯ ಕುರಿತು ಎರಡು ತಿಂಗಳ ಹಿಂದಷ್ಟೇ ಶಾಸಕ ಗುರುರಾಜ್ ಗಂಟಿಹೊಳೆಯವರ ಗಮನಕ್ಕೆ ತರಲಾಗಿದ್ದು, ಸ್ಥಳಕ್ಕೆ ಎಂಜಿನಿಯರ್ ಅನ್ನು ಕರೆಸಿ ನದಿ ತೀರ ಪ್ರದೇಶದ ಮೂರು ಕಿ.ಮೀ. ವ್ಯಾಪ್ತಿಗೆ ತಾತ್ಕಾಲಿಕವಾಗಿ ೨೦ ಲಕ್ಷ ರು. ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಸರ್ಕಾದ ಬಳಿ ಹಣವಿಲ್ಲ ಎನ್ನುವ ಕಾರಣದಿಂದಾಗಿ ಕಾಮಗಾರಿಗೆ ಚಾಲನೆ ದೊರೆತಿಲ್ಲ. । ರಾಜೇಶ್ ದೇವಾಡಿಗ ಮೇಲ್ಮನೆ, ಸ್ಥಳೀಯ ಬಿಜೆಪಿ ಮುಖಂಡ