ಹಾವೇರಿ: ಇತ್ತೀಚಿಗೆ ಅಕಾಲಿಕವಾಗಿ ಅಗಲಿದ ತಾಲೂಕಿನ ಜಿವಿ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಫಕ್ಕೀರಪ್ಪ ಶಿಗ್ಲಿ ಅವರ ನುಡಿ ನಮನ ಕಾರ್ಯಕ್ರಮ ಭಾನುವಾರ ತಾಲೂಕಿನ ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಶತಮಾನೋತ್ಸವ ಸ್ಮಾರಕ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಫಕ್ಕೀರಪ್ಪ ಶಿಗ್ಲಿ ಅವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದ್ದು, ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಅವರು ದಾರಿ ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ, ಮುಖ್ಯವಾಗಿ ಸಾವಿರಾರು ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಶ್ರಮ ವಹಿಸಿದ ಶಿಗ್ಲಿ ಅವರ ಕುಟುಂಬದೊಂದಿಗೆ ನಾವೆಲ್ಲಾ ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಗುದ್ಧಲೀ ಸ್ವಾಮಿ ಮಠದ ಗುದ್ಧಲೀ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಸರಳ ಹಾಗೂ ನಿಸ್ವಾರ್ಥ ಸ್ವಭಾವದಿಂದ ಈ ಭಾಗದ ಮನೆ ಮಾತಾಗಿದ್ದರು. ಯಾವುದೇ ಹಮ್ಮು-ಬಿಮ್ಮಿಲ್ಲದೆ, ತಾವಾಯಿತು ತಮ್ಮ ತರಗತಿಗಳಾಯಿತು ಎಂದು ಕೊಂಡು ಸಂಸ್ಥೆಯ ಶ್ರಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಅವರು ಸಂಸ್ಥೆಯನ್ನ ಕುಟುಂಬಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅವರ ಅಗಲಿಕೆಯಿಂದ ಹೊಸರಿತ್ತಿ ಭಾಗ ಶೈಕ್ಷಣಿಕವಾಗಿ ಬಡವಾಗಿದೆ. ಅವರು ಪಾಲಿಸಿದ ಆದರ್ಶಗಳನ್ನ ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿದ್ಧರಾಜ ಕಲಕೋಟಿ ಮಾತನಾಡಿ, ಫಕ್ಕೀರಪ್ಪ ಅವರು ಅತ್ಯಂತ ಪ್ರಾಮಾಣಿಕ ಹಾಗೂ ಸೌಜನ್ಯ ತುಂಬಿದ ವ್ಯಕ್ತಿಯಾಗಿದ್ದರು. ವೃತ್ತಿಯಲ್ಲಿ ಪ್ರಾಮಾಣಿಕತೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸದಾ ವಿದ್ಯಾರ್ಥಿಗಳ ಶ್ರಯೋಭಿವೃದ್ಧಿಗಾಗಿ ಶ್ರಮಿಸಿದ್ದರು. ಮಾತು ಕಠಿಣವಾದರೂ ಅವರ ಹೃದಯ ಅತ್ಯಂತ ಮೃದುವಾಗಿತ್ತು ಎಂದರು.
ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ, ರಮೇಶ್ ಏಕಬೋಟೆ, ಸೇರಿದಂತೆ ಶಿಗ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ನಿವೃತ್ತ ಪ್ರಾಚಾರ್ಯ ಎಚ್.ಆರ್ ಯಡಹಳ್ಳಿ ನಿರೂಪಸಿದರು.