- ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನ ಕರೆ ತಂದ ಕಾಂಗ್ರೆಸ್ - ಸಮರ್ಥ ಪರ ಪ್ರಚಾರಕ್ಕೆ ಬಂದಿದ್ದೇನೆ, ನನ್ನ ರನ್ ಔಟ್ ಮಾಡಬೇಡಿ: ಮೊಹಮ್ಮದ್ ಅಜ಼ರುದ್ದೀನ್ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದ್ದ ಮಂಗಳವಾರ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆ ತೆಲಂಗಾಣ ಸಚಿವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜ಼ರುದ್ದೀನ್ ಸಹ ಹಳೇ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋ ಮೂಲಕ ಮತಯಾಚಿಸಿದರು.ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಜೊತೆಗೆ ಮೊಹಮ್ಮದ್ ಅಜ಼ರುದ್ದೀನ್, ನಾಸೀರ್ ಹುಸೇನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಪ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಅರ್ಷದ್ ರಿಜ್ವಾನ್, ಹ್ಯಾರೀಸ್ ಸೇರಿದಂತೆ ಅನೇಕರು ರೋಡ್ ಶೋನಲ್ಲಿ ಸಮರ್ಥ ಪರ ಮತಯಾಚಿಸುತ್ತಾ ಸಾಗಿದರು.
ಇದೇ ವೇಳೆ ಡಿ.ಕೆ.ಶಿವಕುಮಾರ ಮಾತನಾಡಿ, ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆಬೀಳಲಿದೆ. ಉಪ ಚುನಾವಣೆಗೆ ಇನ್ನೂ 2 ದಿನಗಳಿವೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ, ನಮ್ಮ ಅಭ್ಯರ್ಥಿ ಸಮರ್ಥನ ಪರ ಮತಯಾಚನೆ ಮಾಡಬೇಕು. ದಿವಂಗತ ಶಾಮನೂರು ಶಿವಶಂಕರಪ್ಪನವರು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ, ಎಲ್ಲ ಧರ್ಮೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರ, ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದನ್ನು ಜನತೆ ಸ್ಮರಿಸುತ್ತಾರೆ. ಇದೀಗ ಅಜ್ಜನ ಹಾದಿಯಲ್ಲೇ ಮೊಮ್ಮಗ ಸಮರ್ಥ ಸಹ ಸಾಗುತ್ತಾನೆಂಬ ವಿಶ್ವಾಸ ತಮಗಿದೆ ಎಂದರು.
ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವಾಗಿದೆ. ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಜಾತಿ, ಧರ್ಮೀಯರನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಶೇ.99 ಭರವಸೆಗಳನ್ನು ಇಲ್ಲಿ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಎಂ.ಶಾಮನೂರುಗೆ ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಮನವಿ ಮಾಡಿದರು.
ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎಚ್. ಮುನಿಯಪ್ಪ, ಎಂ.ಸಿ.ಸುಧಾಕರ, ಶಾಸಕರಾದ ಬೇಲೂರು ಗೋಪಾಲಕೃಷ್ಣ, ಎಚ್.ಸಿ. ಬಾಲಕೃಷ್ಣ, ವೀರೇಂದ್ರ ಪಪ್ಪಿ, ಮಂಜುನಾಥ ಭಂಡಾರಿ ಇತರರು ಇದ್ದರು. ಇದರೊಂದಿಗೆ ಬಹಿರಂಗ ಪ್ರಚಾರ ಮುಕ್ತಾಯದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ, ಮಹಮ್ಮದ್ ಅಜರುದ್ದೀನ್ ಸೇರಿದಂತೆ ಕಾಂಗ್ರೆಸ್ಸಿನ ಸಚಿವರು, ಶಾಸಕರು ಬಾಪೂಜಿ ಗೆಸ್ಟ್ ಹೌಸ್‌ಗೆ ತೆರಳಿದರು. ಅಲ್ಲಿ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
-(ಫೋಟೋವಳಿವೆ):