ಸಾಲದ ರಾಮಯ್ಯ ಎಂಬ ವಿಪಕ್ಷ ಟೀಕೆಗೆ ಶಿವಲಿಂಗೇಗೌಡ ಗರಂ

KannadaprabhaNewsNetwork |  
Published : Apr 08, 2026, 01:30 AM IST
7ಕೆಡಿವಿಜಿ3-ದಾವಣಗೆರೆಯಲ್ಲಿ ಮಂಗಳವಾರ ಶಾಸಕರಾದ ಶಿವಲಿಂಗೇಗೌಡ, ಎ.ಸಿ.ಶ್ರೀನಿವಾಸ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಸಾಲದ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ ಮಾಡಿದ್ದರೂ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ಷೇಪಿಸಿದ್ದಾರೆ.

- ಆರ್ಥಿಕ ಶಿಸ್ತನ್ನು ಮೀರಿ ನಾವು ಸಾಲ ಮಾಡಿಲ್ಲ, ಶಿಸ್ತು ಮೀರಿ ಸಾಲ ಮಾಡಿದ ಮೋದಿ ಬಗ್ಗೆ ಟೀಕಿಸಲಿ: ಅರಸೀಕೆರೆ ಶಾಸಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಸಾಲದ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ ಮಾಡಿದ್ದರೂ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ಷೇಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಣಕಾಸು ಕಾಯ್ದೆ ನಿಬಂಧನೆ ಮೀರದಂತೆ ಸಾಲ ಮಾಡಿದೆ. ಆದರೆ, ಬೇರೆ ರಾಜ್ಯಗಳು ಕಾಯ್ದೆಯನ್ನೂ ಮೀರಿ ಸಾಲ ಮಾಡಿದೆ. ವಿಪಕ್ಷಗಳು ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ಹಣಕಾಸು ನಿಬಂಧನೆ ಕಾಯ್ದೆ ಮೀರಿ ಪ್ರಧಾನಿ ನರೇಂದ್ರ ಮೋದಿ ಸಾಲವನ್ನು ಮಾಡಿದ್ದಾರಲ್ಲವಾ? ಅದನ್ನು ಯಾಕೆ ಬಿಜೆಪಿಯವರು ಜನರ ಮುಂದೆ ಬಿಚ್ಚಿಡುತ್ತಿಲ್ಲ? ಆರ್ಥಿಕ ಮುಗ್ಗಟ್ಟಿನಿಂದ ರಾಜ್ಯ ಸರ್ಕಾರ ಪಾಪರ್ ಆಗಿದೆಯೆಂದು, ಖಜಾನೆ ಖಾಲಿಯಾಗಿದೆಯೆಂದು, ಸಿದ್ದರಾಮಯ್ಯ ಅಲ್ಲ, ಸಾಲದ ರಾಮಯ್ಯ ಅಂತೆಲ್ಲಾ ವಿಪಕ್ಷದವರು ಆರೋಪ, ಟೀಕೆ ಮಾಡುತ್ತಾ, ಅಪಪ್ರಚಾರ ನಡೆಸಿದ್ದಾರೆ. ಮೊದಲು ತಮ್ಮ ತಮ್ಮ ಸ್ಥಿತಿಗತಿ ಅರಿತು ಮಾತನಾಡಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿಯವರಿಗೆ ಮಾನ-ಮರ್ಯಾದೆ ಇದೆಯಾ? ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದಿಂದ ಬರಬೇಕಾದ ಅನುದಾನ ಸರಿಯಾಗಿ ಕೊಡುವಂತೆ ಕೇಂದ್ರದ ಬಳಿ ಧ್ವನಿ ಎತ್ತಲಿ. ತೆರಿಗೆ ಕಟ್ಟುವಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿ ಕರ್ನಾಟಕವಿದೆ. ಆದರೆ, ಕೇಂದ್ರದಿಂದ ಯಾವುದೇ ಅನುದಾನ ರಾಜ್ಯಕ್ಕೆ ಸರಿಯಾಗಿ ಬಂದಿಲ್ಲ. ಬೇರೆ ರಾಜ್ಯಗಳಿಗೆ ನೀಡುವಂತೆ ನಮ್ಮ ರಾಜ್ಯಕ್ಕೆ ಯಾಕೆ ಮೋದಿ ಸರ್ಕಾರ ಅನುದಾನ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಧೋರಣೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಇಡೀ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. ಈ ಮೂಲಕ ಇಡೀ ಕರ್ನಾಟಕ ರಾಜಕೀಯಕ್ಕೆ ಉತ್ತಮ ಸಂದೇಶವನ್ನು ನೀಡಲಿದೆ. ಹಲವಾರು ವಿಷಯಗಳಿಂದಲೂ ದಕ್ಷಿಣ ಚುನಾವಣೆ ಮಹತ್ವ ಪಡೆದಿದೆ. ನಮ್ಮ ಸರ್ಕಾರಕ್ಕೆ ಇದು ಪ್ರತಿಷ್ಠಿತ ಚುನಾವಣೆಯಾಗಿದ್ದು, ಕ್ಷೇತ್ರವನ್ನು ನಾವು ಗೆಲ್ಲಲೇಬೇಕು. ಈಗಾಗಲೇ ಕ್ಷೇತ್ರಾದ್ಯಂತ ನಾವು ಪ್ರಚಾರ ಕೈಗೊಂಡಾಗ ಕಾಂಗ್ರೆಸ್ ಪರ, ನಮ್ಮ ಅಭ್ಯರ್ಥಿ ಸಮರ್ಥ ಶಾಮನೂರು ಪರ ಜನರು ಒಲವು ತೋರಿಸುತ್ತಿದ್ದಾರೆ ಎಂದು ಶಿವಲಿಂಗೇಗೌಡ ತಿಳಿಸಿದರು.

ಬೆಂಗಳೂರಿನ ಪುಲಿಕೇಶಿ ನಗರ ಶಾಸಕ ಎ.ಸಿ. ಶ್ರೀನಿವಾಸ ಮಾತನಾಡಿ, ಏ.9ರಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಎಐಸಿಸಿ, ಕೆಪಿಸಿಸಿ ನಾಯಕರು, ಸಿಎಂ, ಡಿಸಿಎಂ, ಸಚಿವರು, ಶಾಸಕರು ಬಂದು ಪ್ರಚಾರ ಮಾಡಿದ್ದೇವೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಮನಸ್ಸಿನಲ್ಲಿವೆ. ಗ್ಯಾರಂಟಿ ಯೋಜನೆ ಮಧ್ಯೆಯೂ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ. ಅಭಿವೃದ್ಧಿಗೆ ಬೇರೆ ಅನುದಾನ, ಗ್ಯಾರಂಟಿಗೆ ಬೇರೆ ಅನುದಾನ ನೀಡುತ್ತಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ನಮ್ಮ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಪಕ್ಷ ಮತ್ತು ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ಹಿನ್ನೆಲೆ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಕ್ಷೇತ್ರಕ್ಕೆ ಸಮರ್ಥನಾಗಿದ್ದು, ಇಲ್ಲಿ ಕನಿಷ್ಠ 25-30 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಕ್ಷೇತ್ರದಲ್ಲಿ ನಾವು ಪ್ರಚಾರ ಕೈಗೊಂಡಾಗ ಕಾಂಗ್ರೆಸ್ ಪರ ಜನರ ಒಲವು, ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದ ಸೇವೆ, ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆ ಅಭಿಮಾನದಿಂದ ಮಾತನಾಡದ್ದಾರೆ ಎಂದು ಹೇಳಿದರು.

ಮಾಜಿ ಸಂಸದ ಎಂ.ವಿ. ರಾಜೀವ್ ಗೌಡ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ರಘು ದೊಡ್ಡೇರಿ, ನಟೇಶಕುಮಾರ, ಶ್ರೀಧರ ಇತರರು ಇದ್ದರು.

- - -

(ಕೋಟ್‌) ಉಪ ಚುನಾವಣೆ ನಾವು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಗ್ಯಾರಂಟಿಗಳಿಂದ ವೈಯಕ್ತಿಕ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಗ್ಯಾರಂಟಿಯಿಂದ ಸರ್ಕಾರ ದಾರಿ ತಪ್ಪಿದೆಯೆನ್ನುವ ಬಿಜೆಪಿ ತಾಕತ್ತಿದ್ದರೆ ಗ್ಯಾರಂಟಿ ಯೋಜನೆಗಳೇ ಸರಿ ಇಲ್ಲ, ನಿಲ್ಲಿಸುವಂತೆ ಹೇಳಲಿ ನೋಡೋಣ. ಜನರ ಮುಂದೆ ಹೋಗಿ ಗ್ಯಾರಂಟಿ ತೆಗೆದುಕೊಳ್ಳಬೇಡಿ ಅಂತಾ ಹೇಳಲಿ ನೋಡೋಣ.

- ಶಿವಲಿಂಗೇಗೌಡ, ಕಾಂಗ್ರೆಸ್ ಶಾಸಕ, ಅರಸೀಕೆರೆ ಕ್ಷೇತ್ರ.

- - -

-7ಕೆಡಿವಿಜಿ3: ದಾವಣಗೆರೆಯಲ್ಲಿ ಮಂಗಳವಾರ ಶಾಸಕರಾದ ಶಿವಲಿಂಗೇಗೌಡ, ಎ.ಸಿ.ಶ್ರೀನಿವಾಸ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಮೊಗ್ಗದ ವಿವಿಧೆಡೆ ಲೋಕಾಯುಕ್ತ ದಾಳಿ
ಸಾಮಾಜಿಕ ಭದ್ರತಾ ಯೋಜನೆಯಡಿ ಬಡ ಫಲಾನುಭವಿಗಳ ಆದಾಯ ಮಿತಿ ಹೆಚ್ಚಿಸಿ: ಕಲ್ಲೂರು ಮೇಘರಾಜ್