- ಕೇವಲ 2 ಸಾವಿರ ಕ್ವಿಂ. ಮೆಕ್ಕೆಜೋಳ ಖರೀದಿಗೆ ಸೀಮಿತಗೊಳಿಸಿ 61 ರೈತರ ನೋಂದಣಿ: ಅಸಮಾಧಾನ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಮುಗಿದಿದ್ದರಿಂದ ತಾಲೂಕಿನ ಕುಕ್ಕವಾಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಬಂದ ರೈತರು ನಿರಾಸೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಯಿತು. ಈ ಬಗ್ಗೆ ರೈತರು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಬೇಸರ ವ್ಯಕ್ತಪಡಿಸಿದರು.
ಬಿ.ಎಂ.ಸತೀಶ ಕೊಳೇನಹಳ್ಳಿ ಈ ಸಂದರ್ಭ ಮಾತನಾಡಿ, ಕುಕ್ಕವಾಡ ಶುಗರ್ ಫ್ಯಾಕ್ಟರಿ ಮತ್ತು ಡಿಸ್ಟಿಲರಿ ಕ್ವಿಂಟಲ್‌ವೊಂದಕ್ಕೆ ₹2400 ದರದಂತೆ 7295 ಕ್ವಿಂ. ಮೆಕ್ಕೆಜೋಳ ಖರೀದಿಸಲು ಹಾಗೂ ಇದಕ್ಕಾಗಿ ಶೇ.50 ಹಣ ಮುಂಗಡವಾಗಿ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಬಿಜೆಪಿ ಹೋರಾಟಕ್ಕೆ ಮಣಿದು ಕೇವಲ 2000 ಕ್ವಿಂ. ಖರೀದಿಸುವುದಾಗಿ ಹೇಳಿ, ₹24 ಲಕ್ಷ ಮುಂಗಡ ಹಣ ಪಾವತಿಸಿದೆ. ಆದ್ದರಿಂದ ನೋಂದಣಿ ಪ್ರಕ್ರಿಯೆ ಕೇವಲ 2 ಸಾವಿರ ಕ್ವಿಂ.ಗೆ ಸೀಮಿತಗೊಳಿಸಿ, 61 ರೈತರ ನೋಂದಣಿ ಮಾಡಿಕೊಂಡಿದೆ ಎಂದರು.ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಂದಿಗೆ ರೈತರು ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಗದ್ದಲ ಏರ್ಪಟ್ಟಿತ್ತು. ಅನಂತರ ಬಿ.ಎಂ. ಸತೀಶ ಅವರು ನೋಡಲ್ ಅಧಿಕಾರಿಯಾದ ಅಬಕಾರಿ ಡಿಸಿ ಚಿದಾನಂದ ಜನೈ ಜೊತೆಗೆ ಮಾತನಾಡಿ, ನೀವು ಎಲ್ಲಿದ್ದೀರೋ ಅಲ್ಲಿಂದ ನೇರವಾಗಿ ಕುಕ್ಕವಾಡ ಪತ್ತಿನ ಸಹಕಾರ ಸಂಘದ ಬಳಿ ಬರುವಂತೆ ರೈತರ ಪರವಾಗಿ ಪಟ್ಟುಹಿಡಿದರು. ಸ್ವಲ್ಪ ಹೊತ್ತಿನ ನಂತರ ಸ್ಥಳಕ್ಕೆ ದೌಡಾಯಿಸಿದ ಅಬಕಾರಿ ಡಿಸಿ ಅವರು, ಡಿಸ್ಟಿಲರಿಯವರ ಮನವೊಲಿಸಿ, ಉಳಿದ 5295 ಕ್ವಿಂ. ಮೆಕ್ಕೆಜೋಳ ಖರೀದಿಸಲು ಕ್ರಮ ವಹಿಸುವ ಭರವಸೆ ನೀಡಿದರು.
ಮೆಕ್ಕೆಜೋಳ ಬೆಳೆಗಾರ ರೈತರ ಗೋಳು ದಿನದಿನಕ್ಕೂ ಹೇಳತೀರದಾಗಿದೆ. ದರ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾದ ರೈತರನ್ನು ಅಲೆದಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಜಿ.ಎಂ .ಗಂಗಾಧರ ಸ್ವಾಮಿ, ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜು ಇದಕ್ಕೂ, ತಮಗೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾದರೆ ರೈತರ ಅಹವಾಲು ಆಲಿಸುವವರು ಯಾರು ಎಂದು ಬಿ.ಎಂ.ಸತೀಶ ಆಕ್ರೋಶ ವ್ಯಕ್ತಪಡಿಸಿದರು.ರೈತರ ಸಮಸ್ಯೆ ಹಿನ್ನೆಲೆಯಲ್ಲಿ ಕುಕ್ಕವಾಡ ಶುಗರ್ ಕಂಪನಿ ಅಧ್ಯಕ್ಷರಾದ ಎಸ್.ಎಸ್.ಗಣೇಶ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಬಿ.ಎಂ. ಸತೀಶ ರಾಜ್ಯ ಸರ್ಕಾರದ ಆದೇಶದಂತೆ 7295 ಕ್ವಿಂ. ಮೆಕ್ಕೆಜೋಳವನ್ನು ನಿಮ್ಮ ಕಂಪನಿಯಿಂದ ಖರೀದಿಸಬೇಕು ಎಂದು ರೈತರ ಪರವಾಗಿ ಒತ್ತಾಯಿದರು. ಅದಕ್ಕೆ ಸ್ಪಂದಿಸಿದ ಎಸ್.ಎಸ್.ಗಣೇಶ, ಪ್ರಥಮ ಹಂತವಾಗಿ 2 ಸಾವಿರ ಕ್ವಿಂ. ಮೆಕ್ಕೆಜೋಳ ಖರೀದಿಸಲು ₹24 ಲಕ್ಷ ಮುಂಗಡ ಪಾವತಿಸಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದವರು ಪೂರ್ಣ ಪ್ರಮಾಣದಲ್ಲಿ 2 ಸಾವಿರ ಕ್ವಿಂ. ಮೆಕ್ಕೆಜೋಳವನ್ನು ರೈತರಿಂದ ಖರೀದಿಸಿ, ನಮಗೆ ಪೂರೈಸಿದ ನಂತರ ಪುನಃ 2 ಸಾವಿರ ಕ್ವಿಂ. ಖರೀದಿಸಲು ಮುಂಗಡ ಹಣ ಪಾವತಿಸಲಾಗುವುದು. ಹಂತ ಹಂತವಾಗಿ ರಾಜ್ಯ ಸರ್ಕಾರದ ಆದೇಶದಂತೆ 7293 ಕ್ವಿಂ. ಮೆಕ್ಕೆಜೋಳ ಖರೀದಿ ಮಾಡಲಾಗುವುದು. ಈ ಖರೀದಿ ಪ್ರಕ್ರಿಯೆಯನ್ನು ಇನ್ನು ಒಂದು ತಿಂಗಳಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೂ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.ರೈತರಾದ ಕೊಳೇನಹಳ್ಳಿ ಕೆ.ಜಿ.ಚನ್ನಬಸಪ್ಪ, ಎಸ್.ಸಿ.ಸಿದ್ದಪ್ಪ, ಕಾಶೀಪುರ ಸುರೇಶ ಇತರರು ಇದ್ದರು.
- - --6ಕೆಡಿವಿಜಿ1:
ದಾವಣಗೆರೆ ತಾಲೂಕಿನ ಕುಕ್ಕವಾಡ ಶುಗರ್ಸ್‌ನಿಂದ ಮೆಕ್ಕೆಜೋಳ ಖರೀದಿಸುವಂತೆ ಕುಕ್ಕವಾಡ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಮುಖಂಡ ಬಿ.ಎಂ.ಸತೀಶ ನೇತೃತ್ವದಲ್ಲಿ ರೈತರು ಒತ್ತಾಯಿಸಿದರು.